ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಭಾರತ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ಮಾತನಾಡಿ, ದೇಶದಲ್ಲಿ ಕಾಫಿಗೆ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದು, ಉತ್ತಮ ಗುಣಮಟ್ಟದ ಕಾಫಿ ಉತ್ಪಾದಿಸುವ ಮೂಲಕ ಪ್ರಪಂಚದ ಏಳನೆ ಅತ್ಯಧಿಕ ಕಾಫಿ ಬೆಳೆಯುವ ದೇಶವಾಗಿದ್ದು, ಅದನ್ನು ಮೂರನೇ ಸ್ಥಾನಕ್ಕೆ ಕೊಂಡೋಯ್ಯುವ ಯೋಜನೆ ರೂಪಿಸಲಾಗಿದೆ. ರಾಸಾಯನಿಕವನ್ನು ಬಳಸುವ ಬಗ್ಗೆ ಇಂದಿಗೂ ಸಾಕಷ್ಟು ಮಾಹಿತಿಯಿಲ್ಲದ ಕಾರಣ, ಅವರಿಗೆ ಕಂಪನಿ ಸೂಕ್ತ ಮಾರ್ಗದರ್ಶನ ಮಾಡಬೇಕಿದೆ ಎಂದರು.
ಕಾಫಿಯ ಗುಣಮಟ್ಟವನ್ನು ಬೆಳೆಗಾರರು ನಿರಂತರವಾಗಿ ಕಾಪಾಡಿಕೊಂಡು ಬಂದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಮತ್ತು ಬೇಡಿಕೆ ಇದ್ದೇ ಇರುತ್ತದೆ. ಭಾರತದ ಕಾಫಿ ಮತ್ತು ಕರಿಮೆಣಸಿಗೆ ಇಂದಿಗೂ ಬೇಡಿಕೆ ಇದೆ. ಇದೀಗ ರೋಬಸ್ಟಾ ಕಾಫಿಗೆ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಳೆಗಾರರು ಬೆಳೆಯ ಉತ್ಪನ್ನ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದರು. ಆಧುನಿಕ ತಂತ್ರಜ್ಞಾನದ ವೇಗದಿಂದಾಗಿ ಬೆಳೆ ನಿರ್ವಹಣೆಯೂ ಕೂಡ ಸುಲಭ. ಅಗತ್ಯ ಸಂದರ್ಭಗಳಲ್ಲಿ ರೈತರು ಕಾಫಿ ಮಂಡಳಿ ಮತ್ತು ವಿಜ್ಞಾನಿಗಳಿಂದ ಸೂಕ್ತ ಮಾರ್ಗದರ್ಶನ ಪಡೆಯುವುದು ಕೂಡ ಅಗತ್ಯ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸರ್ಕಾರದ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ನಿವೇದಿತಾ ಶುಕ್ಲಾ ಮಾತನಾಡಿ, ಯಾವುದೇ ರಾಸಾಯನಿಕಗಳನ್ನು ರೈತರು ಸುರಕ್ಷಿತವಾಗಿ ಬಳಸಬೇಕು. ಕಾಫಿ ಮಂಡಳಿ ಕಾಫಿ ಬೆಳೆಗಾರರ ಹಿತವನ್ನು ಕಾಪಾಡಲು ಸದಾ ಸಿದ್ಧವಿದೆ. ಜೈವಿಕ ನಿಯಂತ್ರಣ, ಕಾಫಿ ಪ್ರಭೇಧಗಳ ಬಳಕೆಯಂತಹ ಸಮಗ್ರ ಕೀಟ ನಿರ್ವಹಣೆ ಅಭ್ಯಾಸಗಳ ಅಳವಡಿಕೆಗೆ ಉತ್ತೇಜಿಸುವುದು, ಸಂಶ್ಲೇಷಿತ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತೀಯ ಕಾಫಿಯಲ್ಲಿ ಕೀಟನಾಶಕ ಅವಶೇಷಗಳನ್ನು ಕಡಿಮೆ ಮಾಡಲು ಮಂಡಳಿ ಸಹಾಯ ಮಾಡುತ್ತದೆ. ರಾಸಾಯನಿಕ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ಕಂಪನಿ ಬಯೋ ರಾಸಾಯನಿಕ ಉತ್ಪಾದಿಸಲು ಪ್ರಾರಂಭಿಸಿದ್ದು, ನಮ್ಮ ಉತ್ಪನ್ನ 1.4 ಮಿಲಿಯನ್ ರೈತರನ್ನು ತಲುಪಲು ಸಾಧ್ಯವಾಗಿದೆ ಎಂದರು.
ಎಚ್‌ಐಎಲ್ ಸಿಎಂಡಿ ಕುಲದೀಪ್ ಸಿಂಗ್ ಮಾತನಾಡಿ, 1954ರಲ್ಲಿ ಎಚ್‌ಐಎಲ್ ಕಂಪನಿ ಪ್ರಾರಂಭವಾಯಿತು. ಅಂದಿನಿಂದ ರೈತರೊಂದಿಗೆ ಒಳ್ಳೆಯ ಸಂಬಂಧವನ್ನಿರಿಸಿಕೊಂಡು ಗೊಬ್ಬರನ್ನು ವಿತರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿ ಬಯೋ ಕೆಮಿಕಲ್ ಉತ್ಪಾದನೆಯನ್ನು ಪ್ರಾರಂಭಿಸುವ ಮೂಲಕ ಪರಿಸರಕ್ಕೆ ಮತ್ತು ಮಾನವರ ಆರೋಗ್ಯಕ್ಕೆ ಪೂರಕವಾದ ಗೊಬ್ಬರವನ್ನು ಉತ್ಪಾದಿಸುತ್ತಿದೆ. ಮುಂದಿನ ದಿನಗಳಲ್ಲಿ ನೇರವಾಗಿ ರೈತರಿಗೆ ಗೊಬ್ಬರ ದೊರಕುವಂತೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ರೈತರಿಗೆ ಸಮಗ್ರ ಕೀಟ ನಿರ್ವಹಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೀಟನಾಶಕಗಳ ಸುರಕ್ಷಿತ ಮತ್ತು ವಿವೇಚನಾಯುಕ್ತ ಬಳಕೆಯ ಕುರಿತು ಕಾಫಿ ಬೆಳೆಗಾರರಿಗೆ ವಿಚಾರ ಸಂಕಿರಣ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಫಿ ಮಂಡಳಿ ಸದಸ್ಯ ಟಿ.ಎ. ಕಿಶೋರ್ ಕುಮಾರ್, ಜಿಲ್ಲಾ ಸಿ.ಪಿ.ಎ. ಅಧ್ಯಕ್ಷ ನಂದ ಬೆಳ್ಳೀಯಪ್ಪ, ಎಚ್‌ಐಎಲ್ ಮಾರುಕಟ್ಟೆ ನಿರ್ದೇಶಕ ಶಶಾಂಕ್ ಚತುವೇದಿ, ಕೊಡಗು ಕಾಫಿ ಮಂಡಳಿಯ ಡಿಡಿಎಂ ಚಂದ್ರಶೇಖರ್ ಇದ್ದರು.