ಗೋಕರ್ಣ: ಆಹಾರ ಹಾಗೂ ನಿದ್ದೆ ಪರಸ್ಪರ ಸಂಬಂಧಿತವಾಗಿದೆ. ನಿದ್ದೆ ಚೆನ್ನಾಗಿ ಬರಲು ಹಸಿವು ಅಗತ್ಯ ಹಾಗೂ ಆಹಾರ ಸರಿಯಾಗಿದ್ದರೆ ಸರಿಯಾದ ನಿದ್ರೆ ಪ್ರಾಪ್ತವಾಗುತ್ತದೆ. ದೇಹಕ್ಕೆ ಸಂಬಂಧಿಸಿದ ಮೂರು ಉಪಾಂಗಗಳಲ್ಲಿ ನಿದ್ದೆ ಹಾಗೂ ಆಹಾರ ಪ್ರಮುಖವಾಗಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ನಿದ್ರೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿ ಎಂದು ಶಂಕರಾಚಾರ್ಯರು ಉಲ್ಲೇಖಿಸಿದ್ದು, ರಾತ್ರಿ ಹಾಗೂ ಬೆಳಗ್ಗೆಯ ನಡುವಿನ ಎರಡು ಯಾಮಗಳು ನಿದ್ದೆಗೆ ಸೂಕ್ತ ಎಂದು ಶಾಸ್ತ್ರಗಳು ಹೇಳಿವೆ. ಮಧ್ಯರಾತ್ರಿ ಸಮಾನವಾಗಿ ಬರುವಂತೆ ನಿದ್ದೆ ಮಾಡಿದಾಗ ಅದು ಬರಿಯ ನಿದ್ದೆಯಲ್ಲ, ಯೋಗ ಸಮಾಧಿ ಎಂದು ಕರೆಸಿಕೊಳ್ಳುತ್ತದೆ ಎಂದ ಶ್ರೀಗಳು, ಪೂರ್ವಕ್ಕೆ ತಲೆಹಾಕಿ ಮಲಗಿದಾಗ ಸಂಪತ್ತು ಪ್ರಾಪ್ತಿ, ದಕ್ಷಿಣಕ್ಕೆ ಮಲಗಿದಾಗ ಆಯಸ್ಸಿನ ವೃದ್ಧಿ, ಪಶ್ಚಿಮಕ್ಕೆ ಮಲಗಿದಾಗ ಚಿಂತೆ ಹೆಚ್ಚಾಗುವುದು ಹಾಗೂ ಉತ್ತರಕ್ಕೆ ಮಲಗಿದಾಗ ಮೃತ್ಯು ಸಂಭವ ಎಂದು ವಿವರಿಸಿ, ನಿದ್ದೆಗೂ ಪೂರ್ವದಲ್ಲಿ ಸಿದ್ಧತೆಗಳು ಹೇಗಿರಬೇಕು ಎಂದು ವಿಸ್ತಾರವಾಗಿ ಮಾಹಿತಿ ನೀಡಿದರು.
ಗುರಿಕಾರರ ದಿನ: ಗುರಿಕಾರರ ದಿನದ ಅಂಗವಾಗಿ ರಾಜ್ಯ - ಹೊರರಾಜ್ಯಗಳಿಂದ ಆಗಮಿಸಿದ್ದ ಶ್ರೀಮಠದ ಪ್ರತಿನಿಧಿಗಳಾದ ಗುರಿಕಾರರನ್ನು ಆಶೀರ್ವದಿಸಿದ ಶ್ರೀಗಳು, ಗುರಿಕಾರರೆಂದರೆ ಶ್ರೀಮಠದ ಆಂಜನೇಯರಿದ್ದಂತೆ. ಸಮಾಜದ ಮಧ್ಯದಲ್ಲಿ ಶ್ರೀಮಠದ ಕಾರ್ಯಗಳನ್ನು ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಸಂತತಿಯ ವೃದ್ಧಿ, ಹಳ್ಳಿ ಜೀವನಕ್ಕೆ ಒತ್ತು ಹಾಗೂ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಕುರಿತಾಗಿ ಜನ ಜಾಗೃತಿ ಉಂಟುಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು. ಇದೇ ಸಂದರ್ಭದಲ್ಲಿ ೧೧ ಮಂಡಲಗಳಿಂದ ಚಾತುರ್ಮಾಸ್ಯಕ್ಕೆ ಸಂಗ್ರಹವಾದ ನಗದು ಕಾಣಿಕೆಯನ್ನು ಸಾಂಕೇತಿಕವಾಗಿ ಶ್ರೀಗಳಿಗೆ ಸಮರ್ಪಿಸಲಾಯಿತು. ಸಮಸ್ತ ಗುರಿಕಾರರ ಪರವಾಗಿ ಸತ್ಯನಾರಾಯಣ ಮೊಗ್ರ ದಂಪತಿ ಗುರುಭಿಕ್ಷಾ ಸೇವೆ ನೆರವೇರಿಸಿದರು. ಸಮಾಜದ ಮಧ್ಯದಲ್ಲಿ ಶ್ರೀಗಳ ಪ್ರತಿನಿಧಿಗಳಾಗಿ ಇರುವ ಗುರಿಕಾರರ ಕ್ಷೇಮಕ್ಕಾಗಿ ೧೦೦೮ ನವಗ್ರಹ ಶಾಂತಿಯನ್ನು ವಿಶೇಷವಾಗಿ ನಡೆಸಲಾಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಜಿ.ಜಿ. ಹೆಗಡೆ, ಶಿವಶಂಕರ ಭಟ್ಟ ಭೋನಂತಾಯ, ಗಣಪತಿ ಸುಬ್ರಾಯ ಹೆಗಡೆ, ಶಾಂತಾರಾಮ ಹಿರೇಮನೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ದಿನಪ್ರಧಾನರಾಗಿ ಈಶ್ವರ ಕೇಶವ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.ಡಿನ್ನರ್ ನಮ್ಮ ಸಂಸ್ಕೃತಿಯಲ್ಲ: ಸಂಜೆ ಸೂರ್ಯಾಸ್ತವಾಗಿ ಸುಮಾರು ಒಂದು ಗಂಟೆಗೆ ಆಹಾರ ಸ್ವೀಕರಿಸುವುದು ಉತ್ತಮ. ಸಂಜೆಯ ಆಹಾರ ಕಡಿಮೆ ಪ್ರಮಾಣದಲ್ಲಿ ಹಾಗೂ ಜೀರ್ಣಕ್ಕೆ ಸುಲಭವಾಗುವಂತಹದ್ದು ಇರಬೇಕು. ಭೂರಿ ಭೋಜನ ರಾತ್ರಿಯ ಊಟಕ್ಕೆ ನಿಷಿದ್ಧ. ಆದರೆ ಅಂಧಾನುಕರಣೆಗೆ ಒಳಗಾಗಿರುವ ನಾವು ''''''''ಡಿನ್ನರ್'''''''' ಹೆಸರಿನಲ್ಲಿ ರಾತ್ರಿ ಭೋಜನ ಕೂಟವನ್ನು ನಡೆಸುತ್ತಿರುವುದು ಆರೋಗ್ಯಕ್ಕೆ ಹಾನಿ ಎಂದು ಶ್ರೀಗಳು ಪ್ರತಿಪಾದಿಸಿದರು.