- ನಿಟ್ಟೂರಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭ । ಮಕ್ಕಳಿಂದ ಚಿತ್ರಕಲೆ, ನೃತ್ಯ ಪ್ರದರ್ಶನ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪೋಷಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚಾಗಿದೆ. ಇದನ್ನು ಅರಿತು ಸರ್ಕಾರಿ ಶಾಲೆಗಳ ಹಿತದೃಷ್ಟಿಯಿಂದ ಸರ್ಕಾರ ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ, ಪೂರಕ ಪೌಷ್ಠಿಕ ಆಹಾರ ಸೌಲಭ್ಯ ನೀಡುತ್ತ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಸಹ ಆರಂಭ ಮಾಡಿದೆ. ಪೋಷಕರು ಮನಸ್ಸು ಬದಲಾಯಿಸಿ ಅಂಗನವಾಡಿಯತ್ತ ಗಮನಹರಿಸಿ ಮಕ್ಕಳ ದಾಖಲಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ ಹೇಳಿದರು.ಸಮೀಪದ ದೇವರಬೆಳಕೆರೆ ವೃತ್ತದ ನಿಟ್ಟೂರು ಗ್ರಾಮದ ಸಮುದಾಯ ಭವನದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ, ಮಕ್ಕಳ ಚಿತ್ರಕಲೆ, ಕವನ ರಚನೆ ಹಾಗೂ ಎಲ್‌ಕೆಜಿ, ಯುಕೆಜಿ ತರಗತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ತಿಂಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಸಂಘಗಳನ್ನು ಉದ್ಘಾಟಿಸಿದ್ದಾರೆ. ಹಂತ ಹಂತವಾಗಿ ತಾಲೂಕಲ್ಲಿ ಇಂಥ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಸದಸ್ಯರಾಗಿ ಸೌಲಭ್ಯ ಪಡೆದುಕೊಳ್ಳಬೇಕು. ಸರ್ಕಾರಕ್ಕೆ ಮಹಿಳೆಯರು ಆಭಾರಿಯಾಗಬೇಕು ಎಂದರು.ಶಾಲೆಗೆ ತೆರಳುವ, ನೌಕರಿಗೆ ತೆರಳುವ ಮಹಿಳೆಯರ ರಕ್ಷಣೆಗೆ ದಿನದ ೨೪ ಗಂಟೆಯೂ ಅಕ್ಕ ಪಡೆ ಇದೆ. ತುರ್ತು ಸಂದರ್ಭ ೧೧೨ಕ್ಕೆ ಕರೆ ಮಾಡಿದರೆ ಅಕ್ಕ ಪಡೆಯ ಮಹಿಳಾ ಪೋಲೀಸರು ನೆರವಿಗೆ ಬರುತ್ತಾರೆ. ಬಾಲ್ಯವಿವಾಹ, ಮಕ್ಕಳ ಹಿಂಸೆ ಹಾಗೂ ಕಷ್ಟದ ಪರಿಸ್ಥಿತಿಗಳಲ್ಲಿ ಸಹಾಯವಾಣಿ ಸೇವೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಡಿಒ ನರಸಿಂಹಮೂರ್ತಿ ಮಾತನಾಡಿ, ಬಾಲ ವಿಕಾಸ ಸಮಿತಿ ಸಭೆಯಲ್ಲಿ ಅಂಗನವಾಡಿ ಕೇಂದ್ರಗಳ ಸಮಸ್ಯೆಯನ್ನು ಚರ್ಚಿಸಿದ ನಂತರ ಅಂಗನವಾಡಿ ಕೇಂದ್ರದಲ್ಲಿ ನೀರು, ಸ್ವಚ್ಛತೆ ಕೊರತೆ ಇದ್ದಲ್ಲಿ ಮನವಿ ಸಲ್ಲಿಸಿದರೆ ಸೂಕ್ತ ಸೌಲಭ್ಯ ಒದಗಿಸಲು ಸಿದ್ಧ ಎಂದರು.ಇಲಾಖೆ ಮೇಲ್ವಿಚಾರಕಿ ಕೆ.ಟಿ. ಗೀತಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಕವನ ಸ್ಪರ್ಧೆ, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಮಕ್ಕಳಿಗೆ ಚಿತ್ರಕಲೆ, ವೇಷಭೂಷಣ, ಉತ್ತಮ ದಾಖಲಾತಿ ಮಾಡಿದ ಕಾರ್ಯಕರ್ತರಿಗೆ ಬಹುಮಾನ ಏರ್ಪಡಿಸಲಾಗಿದೆ. ಮಹಿಳೆಯರು ಇದೇ ರೀತಿ ಇಲಾಖೆ ಕಾರ್ಯಕ್ರಮಗಳಿಗೆ ಮನಃಪೂರ್ವಕವಾಗಿ ಸಹಕರಿಸಬೇಕು ಎಂದರು.
ಕುಂಬಳೂರು ಗ್ರಾಪಂ ಅಧ್ಯಕ್ಷೆ ಮಧು ತಿಮ್ಮೇಶ್, ಸದಸ್ಯೆ ಸುನಂದಮ್ಮ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಗುರುಪ್ರಸಾದ್, ಪತ್ರಕರ್ತ ಎಚ್.ಎಂ. ಸದಾನಂದ, ರೈತಮಹಿಳೆ ಸರೋಜಮ್ಮ, ಕಾರ್ಯಕರ್ತೆ ನಿರ್ಮಲಾ, ಲಲಿತಾ ಮಾತನಾಡಿದರು.ವೃತ್ತದ ದೇವರಬೆಳಕೆರೆ, ಗುಳದಹಳ್ಳಿ, ಸಂಕ್ಲೀಪುರ, ಮಲ್ಲನಾಯ್ಕನಹಳ್ಳಿ, ಹರಳಹಳ್ಳಿ, ಕುಣೆಬೆಳಕೆರೆ, ಶ್ರೀನಿವಾಸ ನಗರ, ಬೂದಿಹಾಳು, ನಿಟ್ಟೂರು, ನಂದಿತಾವರೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ನೂರಾರು ಮಹಿಳೆಯರು, ಇದ್ದರು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿ ಬಹಮಾನ ವಿತರಿಸಲಾಯಿತು.
- - --ಚಿತ್ರ೧: ಅಂಗನವಾಡಿ ಎಲ್‌ಕೆಜಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ.