ವ್ಯಾಜ್ಯದಲ್ಲಿದ್ದ ತೇಲಿ ಕುಟುಂಬದ 25 ಎಕರೆ ಆಸ್ತಿಯನ್ನು ಖರೀದಿಸಿದ್ದರಿಂದ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರ ಕೊಲೆಯು ಶುಕ್ರವಾರ ಮಧ್ಯಾಹ್ನ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಡೆದಿತ್ತು. ಕೊಲೆಯಾದ ಆರು ಜನರ ಅಂತ್ಯಕ್ರಿಯೆಯೂ ಶನಿವಾರ ಮಧ್ಯಾಹ್ನ ಚಡಚಣದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ವ್ಯಾಜ್ಯದಲ್ಲಿದ್ದ ತೇಲಿ ಕುಟುಂಬದ 25 ಎಕರೆ ಆಸ್ತಿಯನ್ನು ಖರೀದಿಸಿದ್ದರಿಂದ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರ ಕೊಲೆಯು ಶುಕ್ರವಾರ ಮಧ್ಯಾಹ್ನ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಡೆದಿತ್ತು. ಕೊಲೆಯಾದ ಆರು ಜನರ ಅಂತ್ಯಕ್ರಿಯೆಯೂ ಶನಿವಾರ ಮಧ್ಯಾಹ್ನ ಚಡಚಣದಲ್ಲಿ ಜರುಗಿದೆ.
ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನಿರಾಳೆ ಕುಟುಂಬದ ಐವರನ್ನು ಅಗ್ನಿಸ್ಪರ್ಶಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇನ್ನೋರ್ವ ಮುಸ್ಲಿಂ ವ್ಯಕ್ತಿಯನ್ನು ಅವರ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಸಂಸ್ಕಾರದ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಚಡಚಣ ಪಟ್ಟಣವು ಬಹುತೇಕ ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಪಟ್ಟಣದಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಘಟನೆ ಬಗ್ಗೆ ಸಾರ್ವಜನಿಕರಲ್ಲಿ ಮರುಕ ಉಂಟಾಗಿದ್ದಲ್ಲದೆ, ತಕರಾರಿನಲ್ಲಿದ್ದ ಜಮೀನು ಖರೀದಿಸಿ ಅಮಾಯಕ ಕುಟುಂಬ ಬಲಿಯಾಗಿದೆಂದು ಸಾರ್ವಜನಿಕರು ನೋವು ತೋಡಿಕೊಂಡರು. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೋವಿಂದಪುರ ಗ್ರಾಮದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ, ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಆರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತರ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಿದ ಬಳಿಕ ಅಂತ್ಯಸಂಸ್ಕಾರವು ಜರುಗಿತು.
ಬೈಕ್‌ಗಳ ಮೇಲೆ ಬಂದು ಏಕಾಏಕಿ ಹಲ್ಲೆ:
10 ರಿಂದ 15 ಬೈಕ್‌ಗಳ ಮೇಲೆ ಬಂದ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಮನಸ್ಸೋ ಇಚ್ಚೆ ಕೊಚ್ಚಿಹಾಕಿದ್ದಾರೆ. ಘಟನೆಯಲ್ಲಿ ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23) ಹಾಗೂ ಶಬ್ಬೀರ್ ಅತ್ತಾರ(45) ಎಂಬುವವರು ಕೊಲೆಯಾಗಿದ್ದರು. ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಎಂಬುವವರಿಗೆ ಗಾಯಗಳಾಗಿದ್ದು, ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗೋವಿಂದಪುರದಲ್ಲಿದ್ದ 25 ಎಕರೆ ವಿವಾದಿತ ಜಮೀನನ್ನು ಮೃತರು ಖರೀದಿ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗೋವಿಂದಪುರ ಗ್ರಾಮದ ಕಲ್ಲನಗೌಡ ಪಾಟೀಲ ಹಾಗೂ ಇತರರು ಜಮೀನು ಖರೀದಿ ಮಾಡದಂತೆ ಮೊದಲೇ ಎಚ್ಚರಿಕೆ ನೀಡಿದ್ದರು. ಇದು ನಮ್ಮ ಕುಟುಂಬಕ್ಕೆ ಸೇರಬೇಕಾದ ಜಾಗ ಎಂದು ಎಚ್ಚರಿಕೆ ನೀಡಿದ್ದರು. ಆದರೂ ನಿರಾಳೆ ಕುಟುಂಬಸ್ಥರು ಜಮೀನು ಖರೀದಿ ಮಾಡಿದ್ದರು ಎನ್ನಲಾಗಿದೆ. ಇದರಿಂದಾಗಿ ಹಲವು ದಿನಗಳಿಂದ ನಡೆದ ಘರ್ಷಣೆ ಭೀಕರ ಹತ್ಯೆಯಲ್ಲಿ ಅಂತ್ಯವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಹಾಗೂ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದ್ದು, ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಕೊಲೆಯಾದವರ ಕುಟುಂಬಸ್ಥರಿಂದ ದೂರು ದಾಖಲು:
ಘಟನೆ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಮೃತ ದುಂಡಪ್ಪ ನಿರಾಳೆ ಅವರ ಪುತ್ರ ಚೇತನಕುಮಾರ ನಿರಾಳೆ ಪಾಟೀಲ ಕುಟುಂಬದ 12 ಜನರ ಹೆಸರಿನೊಂದಿಗೆ ಇನ್ನಿತರರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಕಲ್ಲನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಈಶ್ವರಪ್ಪ ಪಾಟೀಲ, ಪ್ರಕಾಶ ಪಾಟೀಲ, ಪ್ರಶಾಂತ ಪಾಟೀಲ, ಸಿದ್ಧರಾಮ ಪಾಟೀಲ, ಲಾಯಪ್ಪ ಬಿರಾದಾರ, ಚಿದಾನಂದ ಕೋಳಿ, ಮಾಸಿದ್ದ ಬಿರಾದಾರ, ಶ್ರೀಮಂತ ಬಿರಾದಾರ, ಶಂಕ್ರೆಪ್ಪ ಅರಕೇರಿ, ಅಪ್ಪಾಸಾಬ ಭೋವಿ ಹಾಗೂ ಇನ್ನಿತರ ಆರೋಪಿಗಳು ಎಂದು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಗೋವಿಂದಪುರದ ಜಮೀನಿನಲ್ಲಿ ಹಲವರು ಬಂದು ಚಾಕು, ಮಚ್ಚುಗಳಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಆರು ಜನರು ಮೃತರಾಗಿದ್ದಾರೆ. ವಿಜಯಪುರ ಎಸ್ಪಿ ರವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಬಗ್ಗೆ ಮಾಹಿತಿ ದೊರೆತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು.
-ಸಂದೀಪ ಪಾಟೀಲ, ಉತ್ತರ ವಲಯ ಐಜಿಪಿ. ಹಲವಾರು ಬೈಕ್‌ಗಳಲ್ಲಿ 28 ಜನ ಬಂದು ಆರು ಜನರನ್ನು ಕೊಲೆ ಮಾಡಿದ್ದಾರೆಂದು ಕೊಲೆಯಾದವರ ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ತೇಲಿ ಹಾಗೂ ಪಾಟೀಲ ಎಂಬ ವೈಷಮ್ಯದಿಂದಾಗಿ ತೇಲಿ ಕುಟುಂಬದ 25 ಎಕರೆ ಜಮೀನು ಪಾಳುಬಿದ್ದಿತ್ತು. ಆ ಜಮೀನು ಖರೀದಿಸಿದ್ದಕ್ಕಾಗಿ ಕುಪಿತಗೊಂಡ ಪಾಟೀಲ ಕುಟುಂಬಸ್ಥರು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದ್ದು, ಶೀಘ್ರದಲ್ಲಿ ಆರೋಪಿಗಳ ಬಂಧನವಾಗಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.