ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹಾನುಬಾಳು, ಕಾಡುಮನೆ, ಮಾರನಹಳ್ಳಿ, ದೇಕ್ಲಾ, ರಕ್ಷಿದಿ, ಆನೆಮಹಲ್, ಕುಡುಗರಹಳ್ಳಿ, ಆಚಂಗಿ, ಹಲಸುಲಿಗೆ, ಸುಂಡೆಕೆರೆ, ಬಾಳ್ಳುಪೇಟೆ, ಹೊಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಬಿ ದಿನಾಚರಣೆಯನ್ನು ಆಚರಿಸಿ, ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆಚಂಗಿ ಜುಮಾ ಮಸೀದಿಯ ಅಧ್ಯಕ್ಷ ಹಮೀದ್ ಹಾಜಿ ಮಾತನಾಡಿ, ಪ್ರವಾದಿ ಮಹಮ್ಮದ್ (ಸ) ಅವರ 1501ನೇ ಜನ್ಮದಿನದ ಅಂಗವಾಗಿ ಆಚಂಗಿ ಜಮಾತಿನ ಆಡಳಿತ ಸಮಿತಿ ಹಾಗೂ ಸದಸ್ಯರ ನೇತೃತ್ವದಲ್ಲಿ ಮೀಲಾದ್ ರ್ಯಾಲಿ ಆಯೋಜಿಸಲಾಗಿದೆ. ಪ್ರವಾದಿಯವರ ಜೀವನ ಸಂದೇಶಗಳನ್ನು ಪಾಲಿಸುವುದರೊಂದಿಗೆ ದೇಶದ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುವುದು ಆಚರಣೆಯ ಉದ್ದೇಶವಾಗಿದೆ ಎಂದರು. ಅಬ್ಬು ಉಸ್ತಾದ್ ಮಾತನಾಡಿ, ಧರ್ಮ ಹಾಗೂ ಜಾತಿಯ ಎಲ್ಲೆಗಳನ್ನು ಮೀರಿ ಸ್ನೇಹ, ಪ್ರೀತಿ ಮತ್ತು ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಪರಸ್ಪರರ ಹಬ್ಬ, ಆಚರಣೆ ಹಾಗೂ ಸಂಭ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಸಬೇಕು ಎಂದರು.ದೇಶವು ಶಾಂತಿ ಮತ್ತು ಸೌಹಾರ್ದತೆಯ ಬೀಡಾಗಿ ಮುಂದುವರಿಯಬೇಕು. ಎಲ್ಲರೂ ಸಹಬಾಳ್ವೆಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ದೇಶದ ಜನತೆಗೆ ಎಲ್ಲ ರೀತಿಯಲ್ಲೂ ಒಳಿತಾಗಲಿ ಹಾಗೂ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಮಸೀದಿ ಆವರಣವನ್ನು ನಬಿ ದಿನಾಚರಣೆಯ ಅಂಗವಾಗಿ ಬಂಟಿಂಗ್‌ಗಳು ಹಾಗೂ ವಿವಿಧ ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು. ವಿವಿಧ ಮೊಹಲ್ಲಾಗಳ ಮಸೀದಿಗಳ ನಿವಾಸಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಪ್ರವಾದಿಯವರ ಗುಣಗಾನ ಹಾಗೂ ಸಲಾತ್ ಸಲ್ಲಿಸಿದರು. ಮಕ್ಕಳಿಗಾಗಿ ವಿವಿಧ ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಆಚಂಗಿ ಜುಮಾ ಮಸೀದಿಯ ಅಧ್ಯಕ್ಷ ಹಮೀದ್ ಹಾಜಿ, ಕಾರ್ಯದರ್ಶಿ, ಉಪಾಧ್ಯಕ್ಷ ಶಂಶು, ಖತೀಬರಾದ ರಫೀಕ್ ಮದನಿ, ಇಬ್ರಾಹಿಂ, ಖಲೀಲ್, ಅಝೀಜ್ ಸೇರಿದಂತೆ ಜಮಾತಿನ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.