ಕೊಪ್ಪಳ: ಸಾರ್ವಜನಿಕರಿಗೆ ಸೇವೆ ಒದಗಿಸುವ ಹಾಗೂ ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಅಧ್ಯಕ್ಷ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಜಿಪಂನಲ್ಲಿ ಕಾರ್ಯ ನಿರ್ವಹಿಸುವ ಕೆಲ ಅಧಿಕಾರಿ, ಸಿಬ್ಬಂದಿಗೆ ವಸತಿ ಗೃಹಗಳಿದ್ದು, ಬಾಕಿ ಉಳಿದ ಎಲ್ಲ ಇಲಾಖೆಗಳ ನೌಕರರಿಗೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ರಾಜ್ಯದಲ್ಲಿ ನೂತನವಾಗಿ ಜಾರಿಯಾಗಿರುವ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ಅಡಿ ಜಿಲ್ಲೆಯಲ್ಲಿ ಕೇವಲ ಮೂರು ಆಸ್ಪತ್ರೆಗಳನ್ನು ಒಳಪಡಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸುವಂತೆ ಹಾಗೂ ಯೋಜನೆಯಡಿ ಚಿಕಿತ್ಸಾ ವೆಚ್ಚಗಳ ದರಗಳ ಕುರಿತು ಆಸ್ಪತ್ರೆಗಳಲ್ಲಿ ಗೊಂದಲಗಳಿದ್ದು, ಈ ಕುರಿತು ದರ ಪರಿಷ್ಕರಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರಿಗೆ ಸೇವೆ ಒದಗಿಸುವ ಸರ್ಕಾರಿ ನೌಕರರ ಹಿತ ಕಾಪಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಗುರುಭವನ ನಿರ್ಮಾಣಕ್ಕೆ ಬಹಳ ವರ್ಷಗಳಿಂದಲೂ ಬೇಡಿಕೆ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿವೇಶನ ಗುರುತಿಸಲು ಕ್ರಮ ವಹಿಸಿ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಸರ್ಕಾರ ನಿಗದಿಪಡಿಸಿದ ದರಗಳನ್ವಯ ಮರುಪಾವತಿಗೆ ಸಂಬಂಧಿಸಿದ ಇಲಾಖೆಯ ಬಟವಾಡೆ ಅಧಿಕಾರಿಗಳು ಮಂಜೂರಾತಿ ನೀಡಬೇಕು. ಅನಗತ್ಯ ವಿಳಂಬ ಮಾಡಬಾರದು. ಅನಾಮಧೇಯ ದೂರುಗಳ ಆಧಾರದಲ್ಲಿ ಯಾವುದೇ ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಬಾರದು ಎಂಬ ಆದೇಶವಿದ್ದರೂ, ಕೆಲವು ನೌಕರರು ಅನಾಮಧೇಯ ದೂರುಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಯಾವುದೇ ಇಲಾಖೆಯಲ್ಲಿ ನೌಕರರ ಮೇಲೆ ಅನಾಮಧೇಯ ದೂರುಗಳು ಬಂದಾಗ ಕಡ್ಡಾಯವಾಗಿ ಪ್ರಾಥಮಿಕ ತನಿಖೆ ನಡೆಸಬೇಕು. ತನಿಖೆಯಲ್ಲಿ ತಪ್ಪು ಕಂಡುಬಂದಲ್ಲಿ ಮಾತ್ರ ನೌಕರರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಅನುಭವಿಸುತ್ತಿರುವ ತೊಂದರೆ, ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಹಾಗೂ ಸೂಕ್ತ ಅನುಕೂಲ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಒತ್ತಡದಿಂದ ಪರಿಹಾರ ಪಡೆಯಲು ನೌಕಕರ ಕ್ಲಬ್ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬರುವ ಜ.19 ಮತ್ತು 20 ರಂದು ಕ್ರೀಡಾಕೂಟ ನಡೆಸಲು ಯೋಜಿಸಲಾಗಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರೀಡಾಕೂಟದ ಅಚ್ಚುಕಟ್ಟು ವ್ಯವಸ್ಥೆ ನಿರ್ವಹಿಸಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನೌಕರರಿಗೆ ಟಿ-ಶರ್ಟ್, ಹಣ್ಣು ಒದಗಿಸಬೇಕು. ಎಲ್ಲ ನೌಕರರು ಕ್ರೀಡೆಗಳಲ್ಲಿ ಪಾಲ್ಗೊಂಡು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ., ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಜಂಟಿ ತೋಟಗಾರಿಕೆ ನಿರ್ದೇಶಕ ಕೃಷ್ಣ ಉಕ್ಕುಂದ, ಡಿಡಿಪಿಐ ಸೋಮಶೇಖರಗೌಡ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಜಿಲ್ಲಾ ನೌಕರರ ಸಂಘದ ಖಜಾಂಚಿ ಜಯತೀರ್ಥ ದೇಸಾಯಿ, ಕಾರ್ಯದರ್ಶಿ ಶಿವಪ್ಪ ಜೋಗಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ, ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹುಸೇನ ಬಾಷಾ ಸೇರಿದಂತೆ ವಿವಿಧ ತಾಲೂಕು ನೌಕರರ ಸಂಘದ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕ್ಯಾಲೆಂಡರ್ ಬಿಡುಗಡೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2026 ನೇ ಸಾಲಿನ ಕ್ಯಾಲೆಂಡರ್‌ನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಬಿಡುಗಡೆಗೊಳಿಸಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದರು.