ಶಿಗ್ಗಾಂವಿ: ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಧ್ಯಯನ ಮಾಡಿ ಬದುಕಿನಲ್ಲಿ ಯಶಸ್ವಿಯಾಗಬೇಕು. ಭವ್ಯ ಭಾರತ ನಿರ್ಮಿಸಲು ವಿದ್ಯಾರ್ಥಿಗಳು ಮತ್ತು ಯುವಕರನ್ನು ತಯಾರಿಸುವ ಅವಶ್ಯಕತೆಯಿದ್ದು, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ತಪ್ಪದೇ ಪಾಲಿಸಬೇಕು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.ಪಟ್ಟಣದ ನಳಂದಾ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಳಂದಾ ಶಿಕ್ಷಣ ಸಂಸ್ಥೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ತನ್ನ ಕಾರ್ಯವ್ಯಾಪ್ತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಮಕ್ಕಳಿಗೆ ಶಿಕ್ಷಣವನ್ನ ನೀಡುತ್ತ ಸಾಗಿದೆ. ಬದಲಾದ ಕಾಲಘಟ್ಟದಲ್ಲಿ ನಾವು ಇದ್ದು, ಇಂಟರ್ನೆಟ್ ಯುಗದಲ್ಲಿ ನಾವು ಭವ್ಯ ಭಾರತ ಸೃಷ್ಟಿಗೆ ನಮ್ಮ ಮಕ್ಕಳನ್ನು ತಯಾರು ಮಾಡಬೇಕಿದೆ. ಹಳೆಯ ವಿದ್ಯಾರ್ಥಿಗಳು ಸೇರಿ ಸೇವಾ ನಿಧಿ ಸ್ಥಾಪಿಸಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲು ನಾನೂ ಸಹಿತ ಒಂದು ಲಕ್ಷ ರು.ಗಳ ಠೇವಣಿ ಇಡುವ ಭರವಸೆ ನೀಡಿದರು. ನಮ್ಮ ಭಾರತ ದೇಶಕ್ಕೆ ದೊಡ್ಡ ಇತಿಹಾಸವಿದೆ. ಮೊದಲು ಶಿಕ್ಷಣ ವ್ಯವಸ್ಥೆ ಗುರುಕುಲದಲ್ಲಿ ಪ್ರಾರಂಭವಾಗುತ್ತಿತ್ತು, ಶಿಗ್ಗಾಂವಿ ತಾಲೂಕಿನ ಇತಿಹಾಸದಲ್ಲಿ ಶಿಕ್ಷಣ ವ್ಯವಸ್ಥೆಗೆ ನಳಂದಾ ಶಿಕ್ಷಣ ಸಂಸ್ಥೆ ಒಂದು ಹೊಸ ತಿರುವು ನೀಡಿದೆ. ಗ್ರಂಥಗಳು ಸುಟ್ಟರು ಜ್ಞಾನ ಸುಡುವುದಿಲ್ಲ, ಪ್ರಗತಿಪರ ಚಿಂತಕರು ಹಾಗೂ ನಿಸ್ವಾರ್ಥ ಸಮಾಜಮುಖಿ ವ್ಯಕ್ತಿಗಳಿಂದ ಸ್ಥಾಪಿತವಾದ ಈ ಶಿಕ್ಷಣ ಸಂಸ್ಥೆ ಈ ತಾಲೂಕಿನ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನ ಭಂಡಾರವನ್ನು ನೀಡಿ ಅವರ ಬದುಕು ಹಸನಾಗಿಸಿದೆ. ಜ್ಞಾನ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುತ್ತದೆ ಅಂತ ಶಾಶ್ವತವಾದ ಜ್ಞಾನವನ್ನು ಈ ಸಂಸ್ಥೆ ನೀಡುವಲ್ಲಿ ಸಫಲವಾಗಿದ್ದು, ಇಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.ಜಿಲ್ಲಾ ಶೈಕ್ಷಣಿಕ ನಿರ್ದೇಶಕ ಮೋಹನ್ ದಂಡಿನ ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಫ್.ಸಿ. ಪಾಟೀಲ ವಾರ್ಷಿಕ ವರದಿ ವಾಚಿಸಿದರು.ನಳಂದಾ ಶಿಕ್ಷ ಸಂಸ್ಥೆಯ ಅದ್ಯಕ್ಷ ಡಾ. ಪಿ.ಆರ್. ಪಾಟೀಲ, ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ತಾಲೂಕು ನೌಕರರ ಸಂಘದ ಅದ್ಯಕ್ಷ ಅರುಣ್ ಹುಡೇದಗೌಡ್ರ, ಸೋಮನಗೌಡ ಪಾಟೀಲ, ಸಂಸ್ಥೆಯ ನಿರ್ದೇಶಕ ವಿ.ವಿ. ಕುರ್ತಕೋಟಿ, ಐಪಿಕೆ ಶೆಟ್ಟರ್, ಎಸ್.ಎಂ. ಚಿನ್ನಪ್ಪನವರ, ಸಿ.ಎಸ್. ಹಾವೇರಿ ಹಾಗೂ ಬಿ. ಶ್ರೀ ನಿವಾಸ, ಎಸ್.ಪಿ. ಹಾವೇರಿ, ಕಸ್ತೂರಿ ಗೌರಿಹಳ್ಳಿ, ಚೇತನ ಪಾಟೀಲ, ಆನಂದ ಕುರ್ತಕೋಟಿ, ಶಂಭಣ್ಣ ಹಾವೇರಿ ಸೇರಿದಂತೆ ಶಾಲೆಯ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಇದ್ದರು. ಮುಖ್ಯ ಶಿಕ್ಷಕ ಎಂ.ಬಿ. ಹಳೆಮನಿ ಸ್ವಾಗತಿಸಿದರು.