ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿ ಡಿಜಿಟಲ್ ಆಪ್ ಆಧಾರಿತ ಆಟೋ ಸೇವೆಗೆ ಸರ್ಕಾರದ ಪರವಾನಗಿ ಪತ್ರ ಪಡೆಯುವುದು ಕಡ್ಡಾಯ. ಪರವಾನಗ9ಿ ಹೊಂದಿದ್ದಲ್ಲಿ ಸಾಧಕ-ಬಾಧಕಗಳನ್ನು ಚರ್ಚಿಸಿ, ಚಲಾವಣೆ ಮಾಡುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
ಉಡುಪಿ ನಗರ ವ್ಯಾಪ್ತಿಯ ಮಣಿಪಾಲದಲ್ಲಿ ಡಿಜಿಟಲ್ ಆಪ್ ಆಧಾರಿತ ಬಾಡಿಗೆ ಆಟೋಗಳ ಚಾಲನೆಯ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಡಿಜಿಟಲ್ ಆಪ್ ಆಧಾರಿತ ಕೆಲವು ಸಂಸ್ಥೆಗಳು ಸೇವೆಗಳನ್ನು ಒದಗಿಸುತ್ತಿವೆ. ಈ ಬಗ್ಗೆ ಸರ್ಕಾರದ ಪರವಾನಗಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದೆ ಹಾಜರುಪಡಿಸಿಜಲ್ಲಿ ಸ್ಥಳೀಯ ಆಟೋ ಚಾಲಕರ ಯೂನಿಯನ್‌ಗಳ ಪದಾಧಿಕಾರಿಗಳು ಹಾಗೂ ಆಪ್ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಾಧಕ-ಬಾಧಕಗಳನ್ನು ಚರ್ಚಿಸಿ, ತೀರ್ಮಾನಿಸಲಾಗುವುದು ಎಂದರು.
ಉಡುಪಿ ನಗರದ ವಲಯ -1 ರಲ್ಲಿ ಸುಮಾರು 4000 ಕ್ಕೂ ಹೆಚ್ಚು ಆಟೋರಿಕ್ಷಾಗಳು ನೋಂದಣಿ ಮಾಡಿಕೊಂಡು ಸಂಚರಿಸುತ್ತಿದ್ದು, ಆಟೋ ನಿಲ್ದಾಣಗಳಲ್ಲಿ ಚಾಲಕರು ಸರತಿ ಸಾಲಿನ ಅನ್ವಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇವರಲ್ಲಿ ಕೆಲವರು ಹಲವು ವರ್ಷಗಳಿಂದ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು.ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಡಿಜಿಟಲ್ ಆಪ್ ಆಧಾರಿತ ಆಟೋ ಸಂಚಾರದಿಂದ ನಗರದಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ಆಟೋ ಚಾಲನೆ ಮಾಡಿ, ಜೀವನೋಪಾಯ ನಡೆಸುತ್ತಿರುವವರಿಗೆ ಉಂಟಾಗುವ ಸಮಸ್ಯೆಗಳನ್ನು ಚರ್ಚಿಸಿ, ನಂತರ ಡಿಜಿಟಲ್ ಆಪ್ ಆಟೋ ಸಂಚಾರಕ್ಕೆ ಅವಕಾಶ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಡಿಜಿಟಲ್ ಆಪ್ ಬೇಸ್ಡ್ ಅಟೋ ಸಂಚಾರ ಅಭಿವೃದ್ಧಿಗೊಳಿಸಿದಾಗ ಅದರಿಂದ ಇತರೆ ಆಟೋ ಚಾಲಕರುಗಳಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ವಲಯ-2 ರಲ್ಲಿ ಪರವಾನಿಗೆ ಪಡೆದು ನಗರ ವ್ಯಾಪ್ತಿಯಲ್ಲಿ ಆಟೋ ಚಾಲನೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆಟೋ ನಿಲ್ದಾಣಗಳಲ್ಲಿ ಈ ಹಿಂದೆ ನೋಂದಣಿ ಹೊಂದಿದವರಿಗೆ ಮಾತ್ರ ಅವಕಾಶ ಇದೆ. ನಿಲ್ದಾಣ ಹೊಂದದೇ ಇರುವ ಅಟೋ ಚಾಲಕರು ನೋಂದಣಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಲ್ಲಿನ ಆಟೋ ದಟ್ಟಣಿಕೆ ನೋಡಿ ನಗರಸಭೆಯ ಪೌರಾಯುಕ್ತರೊಂದಿಗೆ ಚರ್ಚಿಸಿ ಅನುಮತಿ ನೀಡಲಾಗುವುದು ಎಂದರು.ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಂತೋಷ್ ಶೆಟ್ಟಿ, ಆಟೋ ರಿಕ್ಷಾ ಯೂನಿಯನ್ ಪದಾಧಿಕಾರಿಗಳು, ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರುಗಳು, ನಮ್ಮ ಯಾತ್ರಿ ಹಾಗೂ ರ‍್ಯಾಪಿಡ್ ಆಪ್ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.