ಧಾರವಾಡ:
ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ರಾಜ್ಯ ಮಾಹಿತಿ ಆಯೋಗವು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ-೨೦೦೫ರ ಕಾರ್ಯಾಗಾರ ಮತ್ತು ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದರು.
ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಕಾಯ್ದೆ ಜಾರಿಯಾದ ದಿನದಿಂದ ಈ ವರೆಗೆ ಕಾರ್ಯನಿರ್ವಹಿಸದ ರಾಜ್ಯದ ೧೦,೭೬೯ ಅಧಿಕಾರಿಗಳಿಗೆ ಒಟ್ಟು ₹ ೧೦,೨೫,೬೬,೪೫೦ ದಂಡ ವಿಧಿಸಿದೆ. ಈ ಪೈಕಿ ೩,೦೮೪ ಅಧಿಕಾರಿಗಳು ₹ ೨,೭೦,೦೮,೪೫೦ ಪಾವತಿಸಿದ್ದಾರೆ. ಜಿಲ್ಲೆಯಲ್ಲಿ ೯೫ ಅಧಿಕಾರಿಗಳಿಗೆ ₹ ೯,೦೯,೫೦೦ ದಂಡ ವಿಧಿಸಿದ್ದು ಇದರಲ್ಲಿ ೧೪ ಅಧಿಕಾರಿಗಳು ₹ ೧,೧೫,೦೦೦ ಪಾವತಿಸಿದ್ದಾರೆ. ದಂಡಕ್ಕೆ ಒಳಗಾಗಿರುವ ಅಧಿಕಾರಿಗಳು ದಂಡ ಪಾವತಿಸದೇ ಇದ್ದಲ್ಲಿ ನಿವೃತ್ತಿ ಸೌಲಭ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ ಎಂದು ತಿಳಿಸಿದರು.ಮಾಹಿತಿ ಆಯೋಗದಲ್ಲಿ ಜಿಲ್ಲೆಯ ೧,೪೮೫ ಅರ್ಜಿಗಳು ಮೇಲ್ಮನವಿಯಾಗಿ ಸಲ್ಲಿಕೆಯಾಗಿದ್ದು, ವಿಚಾರಣೆಗೆ ಬರಲಿವೆ. ರಾಜ್ಯದಲ್ಲಿ ಆಯೋಗಕ್ಕೆ ಸಲ್ಲಿಕೆಯಾಗುವ ಮೇಲ್ಮನವಿಗಳ ಪೈಕಿ ಧಾರವಾಡ ಜಿಲ್ಲೆಯು ೭ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಜ್ಯ ಮಾಹಿತಿ ಆಯೋಗದ ಆಯುಕ್ತ ರಾಜಶೇಖರ ಎಸ್. ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಂತೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡದೇ ಇದ್ದರೆ, ತಪ್ಪು ಮಾಹಿತಿ ನೀಡಿದರೆ ಅಥವಾ ದಾಖಲೆ ನಾಶಪಡಿಸಿದರೆ ದಂಡ ವಿಧಿಸಲಾಗುತ್ತದೆ. ಅರ್ಜಿದಾರರು ಕೇಳಿದ ಮಾದರಿಯಲ್ಲಿ ಅಲ್ಲದೆ, ಲಭ್ಯವಿರುವ ರೂಪದಲ್ಲೇ ಮಾಹಿತಿ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಭುವನೇಶ ಪಾಟೀಲ, ಜನವರಿಯಲ್ಲಿ ಸಲ್ಲಿಕೆಯಾಗಿದ್ದ ಆರ್‌ಟಿಐ ಅರ್ಜಿ ವಿಲೇವಾರಿ ಮಾಡಲಾಗಿದೆ ಮತ್ತು ೨೯ಕ್ಕೂ ಹೆಚ್ಚು ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಎಸ್ಪಿ ಗುಂಜನ್ ಆರ್ಯ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡರ ಸೇರಿದಂತೆ ವಿವಿಧ ಇಲಾಕೆ ಅಧಿಕಾರಿಗಳು ಇದ್ದರು.