ಕಾಯಕದಿಂದ ಸಮೃದ್ಧಿ, ದಾಸೋಹದಿಂದ ಸಂತೃಪ್ತಿ: ಡಾ. ತೋಂಟದ ಸಿದ್ಧರಾಮ ಶ್ರೀ

KannadaprabhaNewsNetwork |  
Published : May 11, 2026, 02:15 AM IST
ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

12ನೇ ಶತಮಾನದಲ್ಲಿ ಶರಣರು ಕೇವಲ ತತ್ವ ಸಿದ್ಧಾಂತಗಳನ್ನು ಬೋಧಿಸಲಿಲ್ಲ. ವಚನಗಳನ್ನು ರಚನೆ ಮಾಡುವುದರೊಂದಿಗೆ ತಮ್ಮ ವಚನಗಳ ಆಶಯದಂತೆ ನಡೆದು ತೋರಿಸಿದರು.

ಗದಗ: 12ನೇ ಶತಮಾನದ ಶರಣರು ಕಾಯಕ- ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ್ದಾರೆ. ಕಾಯಕದಿಂದ ಸಮೃದ್ಧಿ, ದಾಸೋಹದಿಂದ ಸಂತೃಪ್ತಿ ಉಂಟಾಗುತ್ತದೆ. ಸತ್ಯ ಶುದ್ಧ ಕಾಯಕ ನಮ್ಮ ಸಂಸ್ಕೃತಿ ಆಗಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2796ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಹಾಕಿಕೊಟ್ಟ ಕಾಯಕ ದಾಸೋಹದಿಂದ ಬಡತನ ಮತ್ತು ಹಸಿವು ಮುಕ್ತ ಕಲ್ಯಾಣ ರಾಜ್ಯವನ್ನು ಕಟ್ಟಲು ಸಾಧ್ಯವಿದೆ. ಶರಣರು ನಡೆದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದರೆ ನಾವು ಕಲ್ಯಾಣ ರಾಜ್ಯದ ಪ್ರತಿನಿಧಿಗಳು ಆಗಲು ಸಾಧ್ಯವಿದೆ ಎಂದರು.

12ನೇ ಶತಮಾನದಲ್ಲಿದ್ದ ಶರಣರಾದ ಹಡಪದ ರೇಚಣ್ಣ, ಕ್ಷೌರಿಕ ರೇಮಯ್ಯ, ಕನ್ನಡಿ ಕಾಯಕದ ಆಮುಗಿ ದೇವಯ್ಯ, ಓಲೆಯ ಶಾಂತಯ್ಯ, ತುರುಗಾಯಿ ರಾಮಣ್ಣ, ಗ್ರಾಮ ರಕ್ಷಣೆಗೆ ಇದ್ದ ತಳವಾರ ಕಾಮಿದೇವಯ್ಯ ಮೊದಲಾದವರು ತಮ್ಮ ಕಾಯಕವನ್ನು ಮಾಡುವುದರ ಜತೆ ಜತೆಗೆನೇ ವಚನ ರಚನೆಗಳನ್ನು ಮಾಡಿ ಕನ್ನಡ ವಚನ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದರು. ಡಾ. ಆರ್.ಎಂ. ಕಲ್ಲನಗೌಡರ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಕೇವಲ ತತ್ವ ಸಿದ್ಧಾಂತಗಳನ್ನು ಬೋಧಿಸಲಿಲ್ಲ. ವಚನಗಳನ್ನು ರಚನೆ ಮಾಡುವುದರೊಂದಿಗೆ ತಮ್ಮ ವಚನಗಳ ಆಶಯದಂತೆ ನಡೆದು ತೋರಿಸಿದರು. ಕೆಲಸವನ್ನು ಕಾಯಕದ ಎತ್ತರಕ್ಕೆ ಏರಿಸಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು. ಶರಣರ ವಚನಗಳನ್ನು ಕೃಷ್ಣಪ್ರಿಯ ಬದಿ ಹಾಗೂ ತನುಶ್ರೀ ಬದಿ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಧರ್ಮಗ್ರಂಥ ಪಠಣವನ್ನು ಚಾರ್ವಿ ರವಿಕುಮಾರ, ವಚನ ಚಿಂತನವನ್ನು ದೀಕ್ಷಾ ಎಸ್. ಲಮಾಣಿ ನೆರವೇರಿಸಿದರು. ದಾಸೋಹ ಸೇವೆಯನ್ನು ಜ. ತೋಂಟದಾರ್ಯ ವಿದ್ಯಾಪೀಠದ ಐಟಿಐ ಕಾಲೇಜಿನ ಸಿಬ್ಬಂದಿ ವಹಿಸಿಕೊಂಡಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ದರಾಮೇಶ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಎಸ್. ಅಂಗಡಿ, ಪ್ರೊ. ಪಾಠಕ ಹಾಗೂ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಒಂದು ದಿನದ ಆಲೋಚನೆಯಾಗದಿರಲಿ
ಆಧ್ಯಾತ್ಮದ ರತ್ನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ