ಹೊಸಪೇಟೆ: ಅಳವಿನಂಚಿನಲ್ಲಿರುವ ಹಂಪಿಯ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮೀಸಲಿಡುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಕಾರ್ಯ ಪ್ರವೃತ್ತರಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ತುರ್ತು ರಕ್ಷಣೆ: ವಿರೂಪಾಕ್ಷ ರಥ ಬೀದಿಯ ಸಾಲು ಮಂಟಪಗಳು, ಕೃಷ್ಣ ಬಜಾರು ಸಾಲು ಮಂಟಪ, ಅಚ್ಯುತ್ ದೇವಸ್ಥಾನದ ಕಲ್ಯಾಣ ಮಂಟಪ, ದಂಡನಾಯಕನ ಆವರಣದಲ್ಲಿರುವ ಕೋಟೆ, ಹಜಾರ ರಾಮ ದೇವಾಲಯದ ಮುಂದಿರುವ ಕಲ್ಲಿನ ಮಂಟಪಗಳು ಶಿಥಿಲಾವಸ್ಥೆ ತಲುಪಿದ್ದು, ತುರ್ತಾಗಿ ಇವುಗಳನ್ನು ರಕ್ಷಣೆ ಮಾಡುವ ಕಾರ್ಯ ಆಗಬೇಕು ಎಂಬುದು ಸ್ಥಳೀಯರ ಒತ್ತಾಯ.
ಹಾನಿಗೊಳಗಾದ ಸ್ಮಾರಕಗಳು: ವರಾಹ ದೇವಸ್ಥಾನದ ಪ್ರಕಾರದಲ್ಲಿರುವ ಗೋಡೆ, ವಿಠಲ ದೇವಾಲಯದ ಬಳಿ ಕಲ್ಲಿನ ಕಂಬಗಳು ಉರುಳಿ ಬಿದ್ದಿದ್ದವು. ಕೆಲ ಪುರಾತನ ದೇಗುಲದ ಗರ್ಭಗೃಹಗಳನ್ನು ನಿಧಿ ಚೋರರು ಹಾನಿ ಮಾಡಿದ್ದರು. ವಿಗ್ರಹಗಳನ್ನು ವಿರೂಪಗೊಳಿಸಿದ್ದರು. ನಿಧಿ ಆಸೆಗಾಗಿ ಮೌಲ್ಯವಂತ ರಘುನಾಥ ದೇವಾಲಯದ ಗಾಳಿ ಗೋಪುರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಪಟ್ಟಣದ ಎಲ್ಲಮ್ಮ ದೇವಸ್ಥಾನದ ಗೋಪುರದ ಕಳಸವನ್ನು ಕಳ್ಳರು ಕದ್ದೊಯ್ದಿದ್ದರು. ಕಮಲ ಮಹಲ್ ಬೃಹತ್ ಕೋಟೆಯ ಒಂದು ಭಾಗದ ಗೋಡೆ ಉರುಳಿ ಬಿದ್ದಿತ್ತು.ಜತೆಗೆ ಉತ್ಖನನಕ್ಕಾಗಿ ಹಂಪಿ ಪ್ರದೇಶದಲ್ಲಿದ್ದ ಕೆಲ ರೈತರ ಹೊಲ-ಗದ್ದೆಗಳನ್ನು ಸ್ವಾಧೀನ ಪಡಿಸಿಕೊಂಡು ಹತ್ತಾರು ವರ್ಷಗಳ ಕಳೆದರೂ ಈ ಜಾಗದಲ್ಲಿ ಯಾವುದೇ ಕೆಲಸ-ಕಾರ್ಯಗಳನ್ನು ಇಲಾಖೆ ಆರಂಭಿಸಿಲ್ಲ.
ವಿರೂಪಾಕ್ಷೇಶ್ವರ ದೇವಾಲಯದ ರಥ ಬೀದಿಯ ಸಾಲು ಮಂಟಪ, ಅರಸರ ಅರಮನೆ ಆವರಣ, ವಿರೂಪಾಕ್ಷ ದೇವಾಲಯ ಹಿಂಭಾಗದ ಪುಷ್ಕರಣಿ, ಶಿವಾ ಮಂದಿರದ ಗೋಡೆ, ತುಲಾಭಾರ ಮಂಟಪದ ಬಲ ಭಾಗದಲ್ಲಿರುವ ಲಕ್ಷ್ಮಿನರಸಿಂಹ ದೇವಾಲಯದ ಮುಂದಿನ ಗೋಡೆ, ಕುದುರೆ ಮಂಟಪ, ಕೃಷ್ಣ ಬಜಾರ್ ಸಾಲು ಮಂಟಪ ಹಲವು ಸ್ಮಾರಕಗಳು ಕುಸಿದು ಬಿದ್ದಿವೆ. ಇವುಗಳ ಜೀರ್ಣೋದ್ಧಾರ ಕಾರ್ಯ ಕೂಡ ನಡೆಯುತ್ತಿದೆ. ಇನ್ನು ಕೆಲವೆಡೆ ಉರುಳಿ ಬಿದ್ದ ಸ್ಮಾರಕಗಳನ್ನು ಮರು ಜೋಡಣೆ ಮಾಡೇಕಿದೆ.
ಪ್ರವಾಸಿಗರಿಲ್ಲ ರಕ್ಷಣೆ: ನಿತ್ಯ ಹಂಪಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವರು, ಹಂಪಿ ಉತ್ಸವ, ಜಾತ್ರೆ, ಫಲಪೂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುತ್ತಾರೆ. ಈ ವೇಳೆ ಪುರಾತನ ಮಂಟಪಗಳ ಆಶ್ರಯ ಪಡೆಯುವುದು ವಾಡಿಕೆ. ಇತಂಹ ಸಮಯದಲ್ಲಿ ಸ್ಮಾರಕಗಳು ಉರುಳಿ ಬಿದ್ದು ಅವಘಡಗಳು ನಡೆದರೆ ಹೇಗೆ ಎಂಬ ಆತಂಕ ಪ್ರವಾಸಿಗರನ್ನು ಕಾಡುತ್ತಿದೆ.
ವಿರೂಪಾಕ್ಷ ರಥಬೀದಿಯ ಸಾಲು ಮಂಟಪಗಳು, ಕೃಷ್ಣ ಬಜಾರು ಸಾಲು ಮಂಟಪ, ಅಚ್ಯುತ್ ದೇವಸ್ಥಾನದ ಕಲ್ಯಾಣ ಮಂಟಪ, ದಂಡನಾಯಕನ ಆವರಣದಲ್ಲಿರುವ ಕೋಟೆ, ಹಜಾರ ರಾಮ ದೇವಾಲಯದ ಮುಂದಿರುವ ಕಲ್ಲಿನ ಮಂಟಪಗಳು ಶಿಥಿಲಾವಸ್ಥೆ ತಲುಪಿದ್ದು, ತುರ್ತಾಗಿ ಇವುಗಳನ್ನು ರಕ್ಷಣೆ ಮಾಡುವ ಕಾರ್ಯ ಆಗಬೇಕು ಎನ್ನುತ್ತಾರೆ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸಮಿತಿ ಕಮಲಾಪುರ ಅಧ್ಯಕ್ಷ ವಿಶ್ವನಾಥ ಮಾಳಗಿ.