ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪರಿಸರವನ್ನು ನಾವು ರಕ್ಷಿಸಿದರೇ ಅದು ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ಅರಣ್ಯ ಪ್ರದೇಶ ಸೇರಿದಂತೆ ಖಾಲಿ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಹೇಳಿದರು.ತಾಲೂಕಿನ ಹಿಡಕಲ್ ಡ್ಯಾಂನ ರಾಜಾ ಲಖಮಗೌಡ ಜಲಾಶಯ ಮುಂಭಾಗದಲ್ಲಿ ನಿರ್ಮಾಣ ಹಂತದ ಉದ್ಯಾನಕಾಶಿ ಆವರಣದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳ ಜೊತೆಗೆ ಪರಿಸರ ರಕ್ಷಣೆಯೂ ಅವಶ್ಯವಿದೆ. ಯುವ ಸಮೂಹ ಈಗಿನಿಂದಲೇ ಪರಿಸರ ರಕ್ಷಣೆಗೆ ಮುಂದಾಗಬೇಕು ಸಲಹೆ ನೀಡಿದರು.
ಅರಣ್ಯ ಇಲಾಖೆ ಆರ್‌ಎಫ್‌ಒಗಳಾದ ಪ್ರಸನ್ನ್ ಬೆಲ್ಲದ, ಮಹಾಂತೇಶ ಸಜ್ಜನ ಮಾತನಾಡಿ, ಈ ಸಲ ಅರಣ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯಗಳಿಂದ ತಾಲೂಕಿನ ವಿವಿಧ ಕಡೆಗಳಲ್ಲಿ 60 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಗಿಡ-ಮರಗಳು ಇದ್ದಲ್ಲಿ ತಾಪಮಾನ ಕಡಿಮೆ ಆಗುವುದರೊಂದಿಗೆ ಅಂತರ್ಜಲ ಹೆಚ್ಚಾಗುತ್ತದೆ ಎಂದರು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಬಿಇಒ ಪ್ರಭಾವತಿ ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಿಮನಿ, ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ, ಎಂಐಎಸ್ ಸಂಯೋಜಕ ಶಂಕರ ಶಿರಗುಪ್ಪಿ, ಐಇಸಿ ಸಂಯೋಜಕ ಮಹಾಂತೇಶ ಬಾದವಾನಮಠ, ಆಡಳಿತ ಸಹಾಯಕಿ ಪ್ರೀತಿ ಜವಳಿ, ಕಿರಣ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.
ಉಪವಲಯ ಅರಣ್ಯಾಧಿಕಾರಿ ಎಸ್.ಎಸ್.ಕೋರಿ ಸ್ವಾಗತಿಸಿದರು. ಅರಣ್ಯ ವೀಕ್ಷಕ ಶಿವಕುಮಾರ ನಾಯಿಕ, ಅರಣ್ಯ ರಕ್ಷಕ ರಾಜು ಅಮರಾಯಿಗೋಳ ನಿರೂಪಿಸಿದರು. ಶಿವಪ್ಪ ಶಾಂಡಗಿ ವಂದಿಸಿದರು. ಈ ವೇಳೆ ಪರಿಸರ ರಕ್ಷಣೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.