ಕನಕಪುರ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಬಾರಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಕನಕಪುರದ ಸಂಗಮ-ಬೊಮ್ಮಸಂದ್ರದ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳಲಿದ್ದಾರೆ. ಕಳೆದ ವರ್ಷದ ಘಟನೆ ಮರುಕಳುಹಿಸದಂತೆ ತಡೆಯುವ ಸಲುವಾಗಿ ಜಿಲ್ಲಾಡಳಿತ ಮತ್ತು ಕಾವೇರಿ ವನ್ಯಜೀವಿ ವಲಯದ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಕಳೆದ ಬಾರಿ ಮಾದಪ್ಪನ ಭಕ್ತರ ಪಾದಯಾತ್ರೆ ವೇಳೆ ಸಂಗಮದ ಕಾವೇರಿ ನದಿ ದಾಟುವ ಸಂದರ್ಭದಲ್ಲಿ ನದಿ ನೀರು ಏಕಾಏಕಿ ಹೆಚ್ಚಾದ ಪರಿಣಾಮದ ನದಿಯಲ್ಲಿ ಮುಳುಗಿ ಹೋದ ದುರ್ಘಟನೆ ಸಂಭವಿಸಿತ್ತು. ಆದ್ದರಿಮದ ಇಂತಹ ಘಟನೆ ಈ ವರ್ಷ ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಕಾವೇರಿ ವನ್ಯಜೀವಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.ಮಹದೇಶ್ವರ ಬೆಟ್ಟಕ್ಕೆ ತೆರಳುವವರಿಗೆ ರಕ್ಷಣೆ ನೀಡುವಂತೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತೀವರ್ಷ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುವುದು ಪದ್ಧತಿ. ಪ್ರತಿ ವರ್ಷದಂತೆ ಫೆ. 21,22 ಹಾಗೂ 23ರಂದು ಭಕ್ತಾದಿಗಳು ಸಂಗಮ ಬೊಮ್ಮಸಂದ್ರದ ಮಾರ್ಗವಾಗಿ ಬೆಟ್ಟಕ್ಕೆ ತೆರಳಲಿದ್ದು, ಈ ವೇಳೆ ಕಾವೇರಿ ನದಿ ನೀರಿನ ಹರಿವು ಪ್ರಮಾಣ ಕಡಿಮೆ ಮಾಡಬೇಕು. ಆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಪತ್ರ ಬರೆದಿದ್ದಾರೆ.
ಕಾವೇರಿ ವನ್ಯಜೀವಿ ವಲಯದ ಸಂಗಮ ಇಲಾಖೆ, ಭಕ್ತಾದಿಗಳ ಹಿತದೃಷ್ಟಿಯಿಂದ ಈ ಬಾರಿ ಫೆ. 21,22, 23ನೇ ಭಾನುವಾರದ ಮೂರು ದಿನಗಳ ಕಾಲ ಬೊಮ್ಮಸಂದ್ರದಲ್ಲಿ ನದಿ ದಾಟಲು ಅವಕಾಶ ನೀಡಲಾಗಿದೆ. 23ನೇ ಭಾನುವಾರದ ನಂತರ ಬರುವ ಭಕ್ತಾದಿಗಳಿಗೆ ನದಿ ದಾಟಲು ಅವಕಾಶ ಇರುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕೆ ಕೆ ಪಿ ಸುದ್ದಿ 01:
ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಕಾವೇರಿ ಸಂಗಮದಲ್ಲಿ ಹಗ್ಗ ಕಟ್ಟಿ ರಕ್ಷಣೆ ಒದಗಿಸಲು ಸೂಚನೆ.