ಗುಣಮಟ್ಟದ ಎಂಜಿನಿಯರ್‌ಗಳನ್ನು ತಯಾರಿಸುವುದರತ್ತ ನಮ್ಮ ಚಿತ್ತವಿದ್ದು ಇದರಿಂದ ವಿಶ್ವದ ಸ್ಥಿರತೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಟಿಯು ವಿಶ್ವಕ್ಕೆ ಉನ್ನತ ಗುಣಮಟ್ಟದ ಎಂಜಿನಿಯರ್‌ಗಳನ್ನು ನೀಡುತ್ತಿದ್ದು 2035ರ ವೇಳೆಗೆ ವಿಶ್ವದಲ್ಲಿ ಸುಮಾರು 3 ಕೋಟಿಗೂ ಅಧಿಕ ಪ್ರತಿಭಾವಂತ ಕೌಶಲ್ಯಪೂರ್ಣ ಇಂಜಿನಿಯರ್‌ಗಳನ್ನು ಅರಸಿ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ.ಎಸ್. ವಿದ್ಯಾಶಂಕರ್ ಭವಿಷ್ಯ ನುಡಿದರು.ನಗರ ಹೊರವಲಯದ ಮುದ್ದೇನಹಳ್ಳಿಯ ವಿಟಿಯು ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ಮೂರು ದಿನಗಳ ಅಂತಾರಾಷ್ಟ್ರೀಯ ವಿ ಇಂಟರ್‌ನ್ಯಾಷನಲ್ ಸಿಂಪೋಸಿಯಂ ಆನ್ ಸೈನ್ಸ್ ಬಿಯಾಂಡ್ ಬೌಂಡರಿ : ಇನ್ವೆಂಷನ್, ಡಿಸ್ಕವರಿ, ಇನ್ನೋವೇಷನ್ ಅಂಡ್ ಸೊಸೈಟಿ – ರಸಾಯನ-22” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಗುಣಮಟ್ಟದ ಎಂಜಿನಿಯರ್‌ಗಳನ್ನು ತಯಾರಿಸುವುದರತ್ತ ನಮ್ಮ ಚಿತ್ತವಿದ್ದು ಇದರಿಂದ ವಿಶ್ವದ ಸ್ಥಿರತೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಮ್ಮಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಾಂಕ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಕೈಗಾರಿಕಾ ಇಂಟರ್ನ್‌ಶಿಪ್ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸುವ ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಐಐಟಿಗಳ ಮಟ್ಟದ ಗುಣಮಟ್ಟದ ಎಂಜಿನಿಯರ್‌ಗಳನ್ನು ರೂಪಿಸುತ್ತಿದೆ ಎಂದರು.ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆ ತೋರಿರುವ ವಿಜ್ಞಾನಿಗಳು, ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳಿಗೆ ಲೀಡರ್‌ಶಿಪ್ ಅವಾರ್ಡ್, ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್, ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಅವಾರ್ಡ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಬೆಂಗಳೂರು ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ತರುಣ್ ಸೌರದೀಪ್ ಮಾತನಾಡಿ, ಭಾರತ ಜ್ಞಾನದ ತವರು ನೆಲವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನವು ನಾಗರಿಕ ಲೋಕಕ್ಕೆ ಅನೇಕ ಅವಕಾಶಗಳನ್ನು ನೀಡಿದೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಅಪ್ಪಸಾಬ ಎ.ಎಚ್., ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಬೆಂಗಳೂರು ಇದರ ನಿರ್ದೇಶಕ ಡಾ. ಪ್ರೊ. ತರುಣ್ ಸೌರದೀಪ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ್ ಅವರು ತಮ್ಮ ಸಂದೇಶಗಳಲ್ಲಿ ಅಂತರಶಾಖಾ ಸಂಶೋಧನೆ, ನವೀನತೆ ಹಾಗೂ ವಿಜ್ಞಾನಾಧಾರಿತ ಸಾಮಾಜಿಕ ಅಭಿವೃದ್ಧಿಯ ಮಹತ್ವವನ್ನು ಒತ್ತಿಹೇಳಿದರು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಪಾನ್, ಜರ್ಮನಿ ಸೇರಿದಂತೆ ವಿವಿಧ ದೇಶಗಳಿಂದ ಹಾಗೂ ಭಾರತದಿಂದ ಒಟ್ಟು 50ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಅವರ ಅತ್ಯುತ್ತಮ ಸಂಶೋಧನಾ ಕೊಡುಗೆಗಳಿಗಾಗಿ ಗೌರವಿಸಲಾಯಿತು.ಮೂರು ದಿನಗಳ ಈ ಸಮ್ಮೇಳನವು ಡಾ. ದಿನೇಶ್ ರಂಗಪ್ಪ ಅವರು ಅಧ್ಯಕ್ಷತೆ ವಹಿಸಿದ್ದು ಚಿರಂತನ ರಸಾಯನ ಸಂಸ್ಥೆಯ ಅಧ್ಯಕ್ಷ ಬ್ರಜ್ ಗೋಪಾಲ್ ಬಾಗ್ ಹಾಗೂ ಕಾರ್ಯದರ್ಶಿ ಡಾ. ಸಿ. ಬಿ. ಯೆಳಮಗ್ಗದ ಅವರ ಸಹಯೋಗದೊಂದಿಗೆ ಸಮ್ಮೇಳನದ ಸಂಚಾಲಕರಾಗಿ ಡಾ. ಪ್ರಸನ್ನ ಡಿ. ಶಿವರಾಮು ಹಾಗೂ ಸಹ-ಸಂಚಾಲಕರಾಗಿ ಡಾ. ನವ್ಯಾ ರಾಣಿ ಎಂ. ಅವರು ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜಾಸಾಬ್, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಯಕರ್, ಪಶ್ಚಿಮ ಬಂಗಾಳದ ಚಿರಂತನ ರಸಾಯನ ಸಂಸ್ಥೆ – ವಿದ್ಯಾಸಾಗರ್ ವಿಶ್ವವಿದ್ಯಾಲಯದ ಪ್ರೊ. ಬ್ರಜಾ ಗೋಪಾಲ್ ಬಾಗ್, ವಿಟಿಯು ರಿಜಿಸ್ಟ್ರಾರ್ ಪ್ರಸಾದ್ ಬಿ. ರಾಂಪುರೆ, ಮೌಲ್ಯಮಾಪನ ಕುಲಸಚಿವ ಯು.ಜೆ. ಉಜ್ವಲ್, ಆರ್ಥಿಕ ಅಧಿಕಾರಿ ಪ್ರಶಾಂತ್ ನಾಯಕ್ ಜಿ., ಡಾ. ದಿನೇಶ್ ರಂಗಪ್ಪ, ಡಾ. ಸಿ.ವೈ. ಯೆಲಮಗಡ, ಡಾ. ಪ್ರಸನ್ನ ಡಿ. ಶಿವರಾಮು, ಡಾ. ನವ್ಯರಾಣಿ ಮತ್ತಿತರರು ಇದ್ದರು.

ಸಿಕೆಬಿ-4 ನಗರ ಹೊರವಲಯದ ಮುದ್ದೇನಹಳ್ಳಿಯ ವಿಟಿಯು ಕ್ಯಾಂಪಸ್‌ನಲ್ಲಿ ನಡೆದ ಮೂರು ದಿನಗಳ ಅಂತರಾಷ್ಟ್ರೀಯ ವಿ ಇಂಟರ್‌ನ್ಯಾಷನಲ್ ಸಿಂಪೋಸಿಯಂ ಆನ್ ಸೈನ್ಸ್ ಬಿಯಾಂಡ್ ಬೌಂಡರಿ : ಇನ್ವೆಂಷನ್, ಡಿಸ್ಕವರಿ, ಇನ್ನೋವೇಷನ್ ಅಂಡ್ ಸೊಸೈಟಿ – ರಸಾಯನ-22” ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಮಾತನಾಡಿದರು