ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಗ್ರಾಮ ಪಂಚಾಯಿತಿಗಳು ಗಮನ ಹರಿಸಬೇಕು ಎಂದು ಇಒ ಅನಂತರಾಜು ಪಿಡಿಒ ಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಗ್ರಾಮ ಪಂಚಾಯಿತಿಗಳು ಗಮನ ಹರಿಸಬೇಕು ಎಂದು ಇಒ ಅನಂತರಾಜು ಪಿಡಿಒ ಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಮುನ್ನೆಚ್ಚರಿಕೆ ತುರ್ತು ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.

ನೀರು ಪೂರೈಕೆಯಾಗುವ ಪೈಪ್ ಲೈನ್ ಗಳನ್ನು ದುರಸ್ತಿಗೊಳಿಸಿ ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಕುಡಿಯುವ ನೀರನ್ನು ಪರೀಕ್ಷೆ ಮಾಡಬೇಕು. ಬೀದಿನಾಯಿಗಳ ನಿರ್ವಹಣೆಗೆ ವರ್ಗ 1 ರಲ್ಲಿ 2ರಷ್ಟು ಹಣ ಮೀಸಲಿಡುವುದು. ಇದರ ಜೊತೆಗೆ ಕಂದಾಯ ವಸೂಲಾತಿ ಆಂದೋಲನವನ್ನು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. ವಸೂಲಾತಿ ಮಾಡಿದ ಹಣವನ್ನು ಆ ದಿನವೇ ಬ್ಯಾಂಕ್ ಗೆ ಜಮಾ ಮಾಡಿ ಡೇ ಬುಕ್ ನಲ್ಲಿ ನಮೂದಿಸಬೇಕು. ಈ ಬಗ್ಗೆ ಕಾರ್ಯದರ್ಶಿಗಳು ಪರಿಶೀಲನೆ ನಡೆಸಬೇಕು ಎಂದು ಅವರು ಸೂಚಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಅನುಪಯುಕ್ತ ಕೊಳವೆ ಬಾವಿಗಳನ್ನು ಪತ್ತೆಹಚ್ಚಿ ಮುಚ್ಚಬೇಕು. ಜಾತ್ರೆ, ದಾಸೋಹಗಳಲ್ಲಿ ನೀರಿನ ನಿರ್ವಹಣೆ ಬಗ್ಗೆ ಹಾಗೂ ಚಿರತೆ ದಾಳಿ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದರು. ತಾಪಂ ವಿಷಯ ನಿರ್ವಾಹಕ ಕುಮಾರಸ್ವಾಮಿ, ಪುಷ್ಪಲತಾ ಮತ್ತು 27 ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ನೀರು ವಿತರಕರು ಸಭೆಯಲ್ಲಿ ಹಾಜರಿದ್ದರು.