ಹೊಸಪೇಟೆ: ಮಾನವ ಹಕ್ಕುಗಳಿಂದ ಪ್ರತಿಯೊಬ್ಬರ ಸರ್ವತೋಮುಖ ಅಭಿವೃದ್ಧಿ ಮತ್ತು ಮಾನವನ ಅಸ್ತಿತ್ವ ಸಾಧ್ಯವಾಗಿದೆ. ಇವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಾನವನಿಗೆ ಯಾವುದೇ ಸ್ವಾತಂತ್ರ‍್ಯ ಹಾಗೂ ಹಕ್ಕುಗಳು ಇರದೇ ಹೋಗಿದ್ದರೆ ಮನುಷ್ಯ ಹೇಗೆ ಬೇಕೋ ಹಾಗೆ ಬದುಕುತ್ತಿದ್ದ. ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲವಾಗಿರುತ್ತಿತ್ತು. ಮಾನವ ಹಕ್ಕುಗಳು ನಾಗರಿಕ ಸಮಾಜದಲ್ಲಿ ಸ್ವಾತಂತ್ರ‍್ಯವನ್ನು ಎತ್ತಿ ಹಿಡಿಯುತ್ತದೆ ಎಂದರು.
ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಪಕ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಮಾನವ ಹಕ್ಕುಗಳು ಉಲ್ಲಂಘನೆಯಾದಲ್ಲಿ ಸಂವಿಧಾನಾತ್ಮಕವಾಗಿ ಪರಿಹಾರ ಕಂಡುಕೊಳ್ಳಬಹುದು. ಅಂಬೇಡ್ಕರ್ ಭಾರತ ದೇಶಕ್ಕೆ ಅತಿದೊಡ್ಡ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಪ್ರತಿಯೊಬ್ಬರ ಅಭಿವೃದ್ಧಿ ಹಾಗೂ ಅಸ್ತಿತ್ವಕ್ಕೆ ಕಾರಣವಾಗಿದ್ದಾರೆ. ಎರಡು ಮಹಾಯುದ್ಧಗಳ ನಂತರದಲ್ಲಿ ವಿಶ್ವ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು, ಮಾನವ ಹಕ್ಕುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.ಇದೇ ವೇಳೆ ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.