ಕನ್ನಡಪ್ರಭ ವಾರ್ತೆ, ಉಡುಪಿ
ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಯ ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಸಂತ್ರಸ್ತರ ಗೌಪ್ಯತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ. ಅವರ ಹೆಸರು, ಗುರುತು, ಪರಿಚಯವನ್ನು ಬಹಿರಂಗಪಡಿಸಿದವರ ಮೇಲೂ ಕಾನೂನು ಕ್ರಮ - ಶಿಕ್ಷೆಗೆ ಫೋಕ್ಸೋ ಕಾಯಿದೆಯಲ್ಲಿಯೇ ಅವಕಾಶ ಇದೆ. ಇದಕ್ಕೆ ಮಾಧ್ಯಮಗಳೂ ಹೊರತಲ್ಲ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1(ಪೊಕ್ಸೋ) ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಹೇಳಿದ್ದಾರೆ.ಅವರು ಮಂಗಳವಾರ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪೋಕ್ಸೊ ಪ್ರಕರಣಗಳಲ್ಲಿ 18ವರ್ಷದ ಕೆಳಗಿನ ನೊಂದ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷ ಪೊಲೀಸರು ಅದರಲ್ಲೂ ಮಹಿಳೆಯರು ಇವರನ್ನು ವಿಚಾರಣೆ ಮಾಡಬೇಕು ಮತ್ತು ಮಹಿಳಾ ವೈದ್ಯಾಧಿಕಾರಿಗಳೇ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಯಾವುದೇ ಸಂದರ್ಭದಲ್ಲೂ ಇವರನ್ನು ಸಾರ್ವಜನಿಕ ಸಂಪರ್ಕಕ್ಕೆ ತರಲು ಅವಕಾಶ ಇಲ್ಲ ಎಂದು ಮಾಹಿತಿ ನೀಡಿದರು.ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾದರೆ ಅದು ಕೂಡ ಫೋಕ್ಸೋ ಕಾಯಿದೆಯಡಿ ಬರುವುದರಿಂದ, ಅಂತಹ ಬಾಲಕಿಯರ ಮಾಹಿತಿ ಇರುವ ವೈದ್ಯರು ಅಥವಾ ಇನ್ನಿತರರು ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅವರು ಕೂಡ ಅಪರಾಧಿಗಳಾಗುತ್ತಾರೆ ಎಂದರು.
ಪೋಕ್ಸೊ ಪ್ರಕರಣಗಳಲ್ಲಿ 30 ದಿನಗಳಲ್ಲಿ ವಿಚಾರಣೆ ಮುಗಿಸಿ, ವರ್ಷದೊಳಗೆ ತೀರ್ಪು ನೀಡಬೇಕು. ಈ ಕಾಯಿದೆ ಬಗ್ಗೆ ಅರಿವಿಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಆ ಬಗ್ಗೆ ಮಾಧ್ಯಮಗಳು ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಶರ್ಮಿಳಾ ಎಸ್. ಮಾತನಾಡಿ, ಪೋಕ್ಸೊ ಪ್ರಕರಣಕ್ಕೆ ಮೂಲ ಕಾರಣ ಮೊಬೈಲ್ ಬಳಕೆ. ಮಕ್ಕಳು ಮೊಬೈಲ್ ಜಾಸ್ತಿ ಬಳಸುತ್ತಿದ್ದರೆ ಅವರ ಮೇಲೆ ಗಮನ ಹರಿಸಬೇಕಾಗಿರುವುದು ಪೋಷಕರ ಜವಾಬ್ದಾರಿಯಾಗಿದೆ. ಮೊಬೈಲ್‌ನಲ್ಲಿ ಚಾಟಿಂಗ್ ಮೂಲಕ ಆರಂಭವಾದ ಗೆಳೆತನ ಲೈಂಗಿಕ ದೌರ್ಜನ್ಯದಲ್ಲಿ ಅಂತಿಮವಾಗುತ್ತಿದೆ ಎಂದು ಎಚ್ಚರಿಸಿದರು.
ಪೋಕ್ಸೋ ಪ್ರಕರಣಗಳ ದುರುಪಯೋಗ ಕೂಡ ನಡೆಯುತ್ತಿದೆ. ಆ ರೀತಿ ದುರುಪಯೋಗ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.ಕಾರ್ಯಾಗಾರ ನಡೆಸಿಕೊಟ್ಟ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ, 2012ರಲ್ಲಿ ಅನುಷ್ಠಾನಕ್ಕೆ ಬಂದ ಪೋಕ್ಸೋ ಕಾಯಿದೆಯಡಿ 20ವರ್ಷಗಳ ವರೆಗೂ ಶಿಕ್ಷೆ ವಿಧಿಸಬಹುದಾಗಿದೆ. 2019ರಲ್ಲಿ ಆಗಿರುವ ತಿದ್ದುಪಡಿಯಿಂದ ಈ ಪ್ರಕರಣದಲ್ಲಿ ಮರಣ ದಂಡನೆ ಕೂಡ ವಿಧಿಸಬಹುದಾಗಿದೆ. ಈ ಕಾಯಿದೆಯ ಕಲಂ 23ರನ್ನು ವಿಶೇಷವಾಗಿ ಈ ಪ್ರಕರಣಗಳ ಬಗ್ಗೆ ಮಾಧ್ಯಮಗಳ ನಡವಳಿಕೆಯ ಬಗ್ಗೆಯೇ ರೂಪಿಸಲಾಗಿದೆ. ಸುದ್ದಿಗಾರರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಕಾರ್ಯದರ್ಶಿ ರಾಜೇಶ್ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.