68ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಸಚಿವ । ರಥಯಾತ್ರೆ, ಎಡೆ ದೊರೆ ಸಾಧನಾ ಪುರಸ್ಕಾರ ಕನ್ನಡಪ್ರಭ ವಾರ್ತೆ ರಾಯಚೂರು ಕನ್ನಡ ನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಅದರಂತೆ ನಾಡಿನ ಉಜ್ವಲ ಮತ್ತು ಭವ್ಯ ಸಾಂಸ್ಕೃತಿಕ ಪರಂಪರೆ, ಕನ್ನಡ ನಾಡು ನುಡಿಯ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಸ್ಥಳೀಯ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಮರಸ್ಯವೇ ನಮ್ಮ ನಾಡಿನ ಸಂಸ್ಕೃತಿಯ ಜೀವಾಳವಾಗಿದೆ. ಕರ್ನಾಟಕವು ಸರ್ವಧರ್ಮ ರಕ್ಷಣೆ, ಸತ್ಯಾರಾಧನೆ, ಧರ್ಮನೀತಿ, ಸರ್ವಧರ್ಮ ಸಹಿಷ್ಣುತೆ, ಧಾರ್ಮಿಕ ಸಮನ್ವಯ, ಸಹಬಾಳ್ವೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ದಿವ್ಯ ಸ್ವರ್ಗವಾಗಿದೆ. ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಜಿಲ್ಲೆಯು ತನ್ನದೇ ಐತಿಹಾಸಿಕ ವಿಶೇಷತೆಯನ್ನು ಹೊಂದಿದೆ. ಜಿಲ್ಲೆಯ ವಿವಿಧೆಡೆ ಸಿಗುವ ಶಿಲಾಶಾಸನಗಳು, ಕೋಟೆ ಕೊತ್ತಲಗಳು ಹಾಗೂ ದೇವಸ್ಥಾನಗಳು ಇದಕ್ಕೆ ಸಾಕ್ಷಿಯಾಗಿವೆ. ಅದರಂತೆ ನಮ್ಮ ಕನ್ನಡ ನಾಡು ಕೂಡ ಸಾಕಷ್ಟು ವಿಶೇಷತೆಗಳನು ಹೊಂದಿದೆ. ಕರ್ನಾಟಕ ಅನ್ನುವುದು ಕೇವಲ ಒಂದು ಭೂ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಸಂಸ್ಕೃತಿ, ಜನ ಸಮುದಾಯ, ಜೀವನ ಪದ್ಧತಿ ಎಲ್ಲವೂ ಈ ಕನ್ನಡದಲ್ಲಿದೆ. ರಾಜ್ಯ ಸರ್ಕಾರ ಕನ್ನಡ ನಾಡು,ನುಡಿ, ನೆಲ ಜಲ ಸಂರಕ್ಷಣೆ ವಿಷದಲ್ಲಿ ಬದ್ಧವಾಗಿದ್ದು, ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಪಂ ಸಿಇಒ ರಾಹುಲ್ ತುಕಾರಾಮ ಪಾಂಡ್ವೆ, ಎಸ್ಪಿ ನಿಖಿಲ್.ಬಿ, ಎಡಿಸಿ ದುರುಗೇಶ, ಸಹಾಯಕ ಆಯುಕ್ತೆ ಮಹಿಬೂಬಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಗಣ್ಯರು, ಸಾಹಿತಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. - - - ಬಾಕ್ಸ್ ರಾಯಚೂರಿನಲ್ಲಿ ಭುವನೇಶ್ವರಿ ರಥಯಾತ್ರೆ 68ನೇ ಕರ್ನಾಟಕ ರಾಜ್ಯೋತ್ಸವದಂಗವಾಗಿ ನಗರದ ಕರ್ನಾಟಕ ಸಂಘದಲ್ಲಿ ವೈದ್ಯಕೀಯ ಶಿಕ್ಷಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ.ಆರ್ ಪಾಟೀಲ್ ಧ್ವಜಾರೋಹಣ ನೆರವೇರಿಸಿ ನಂತರ ನಾಡದೇವಿ ಭುವನೇಶ್ವರಿ ಮಾತೆಗೆ ಪೂಜೆ ನೆರವೇರಿಸಿದರು. ನಂತರ ಮಕ್ಕಳಿಗೆ ಸಿಹಿ ಹಂಚಿ, ಭುವನೇಶ್ವರಿ ರಥಯಾತ್ರೆಗೆ ಚಾಲನೆ ನೀಡಿದರು. ನಂತರ ರಥಯಾತ್ರೆಯು ನಗರದ ಕರ್ನಾಟಕ ಸಂಘದಿಂದ ಪ್ರಮುಖ ರಸ್ತೆಗಳ ಮೂಲಕ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ತಲುಪಿತು. ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಸೇರಿದಂತೆ ಸಾಹಿತಿಗಳು, ಕಲಾವಿದರು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. - - - ನಾಲ್ವರಿಗೆ ಎಡೆದೊರೆ ಸಾಧನಾ ಪುರಸ್ಕಾರ ಪ್ರದಾನ ಪ್ರಸಕ್ತ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಲ್ವರು ಮಹನೀಯರಿಗೆ ಎಡೆ ದೊರೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನರಸಿಂಗರಾವ್ ಸರ್ಕೀಲ್ (ಪತ್ರಿಕೋದ್ಯಮ), ಬುರ್ ಕಥಾ ಅಯ್ಯಮ್ಮ (ಜನಪದ), ಸೂಲಗಿತ್ತಿ ಮಲ್ಲಮ್ಮ (ಸಮಾಜ ಸೇವೆ) ಮತ್ತು ಅಮರೇಶ್ ಯತಗಲ್ (ಸಾಹಿತ್ಯ) ಅವರಿಗೆ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಎಡೆ ದೊರೆ ಸಾಧನಾ ಪುರಸ್ಕಾರ ನೀಡಿ ಗೌರವಿಸಿದರು. - - - 01ಕೆಪಿಆರ್‌ಸಿಆರ್01: ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಧ್ವಜಾರೋಹಣವನ್ನು ನೆರವೇರಿಸಿದರು. 01ಕೆಪಿಆರ್‌ಸಿಆರ್02:ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 01ಕೆಪಿಆರ್‌ಸಿಆರ್03: ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳ ನೃತ್ಯಪ್ರದರ್ಶನ ಗಮನ ಸೆಳೆಯಿತು. 01ಕೆಪಿಆರ್‌ಸಿಆರ್04: ರಾಯಚೂರು ನಗರದಲ್ಲಿ 68 ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಭುವನೇಶ್ವರಿ ರಥಯಾತ್ರೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. 01ಕೆಪಿಆರ್‌ಸಿಆರ್05: ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆ ನಾಲ್ಕು ಜನ ಸಾಧಕರಿಗೆ ಎಡೆ ದೊರೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.