ಕನ್ನಡಪ್ರಭ ವಾರ್ತೆ ಮೈಸೂರು
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಮತ್ತು ಸಹಚರರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆಯವರು ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.ನಟ ದರ್ಶನ್ ಕೊಲೆಯಂತಹ ನೀಚ ಕೃತ್ಯ ಮಾಡಿರುವುದು ಖಂಡನಿಯ. ತೆರೆಯ ಮೇಲೆ ನಾಯಕನಾಗಿ, ನಿಜ ಜೀವನದಲ್ಲಿ ಕೊಲೆಗುಡುಕನಾಗಿ ಒಂದು ಜೀವವನ್ನೇ ತೆಗೆದಿರುವುದು ಘೋರ ಅಪರಾಧ. ಹೀಗಾಗಿ, ಆತನಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದರು.
ಚಲಚಿತ್ರ ವಾಣಿಜ್ಯ ಮಂಡಳಿ ದರ್ಶನ್ ಚಿತ್ರಗಳನ್ನು ಬಹಿಷ್ಕರಿಸಬೇಕು. ಯಾವುದೇ ಕಾರಣಕ್ಕೂ ಸೆನ್ಸಾರ್ ನಿಂದ ದರ್ಶನ್ ಯಾವ ಸಿನಿಮಾ ಸಹ ಹೊರಗಡೆ ಬರಬಾರದು. ನಿರ್ಮಾಪಕರು, ನಿರ್ದೇಶಕರು ನಟಿಸಲು ಅವಕಾಶ ನೀಡಬಾರದು. ರಾಜ್ಯದ ಜನ ದರ್ಶನ್ ಸಿನಿಮಾ ನೋಡಬಾರದು ಎಂದು ಅವರು ಆಗ್ರಹಿಸಿದರು.ಚಲನಚಿತ್ರ ವಾಣಿಜ್ಯ ಮಂಡಳಿ ರೇಣುಕಾಸ್ವಾಮಿಯವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲದೆ, ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಮುಖ್ಯಮಂತ್ರಿ, ಸಚಿವರು ಹೋಗದಿರುವುದು, ಪರಿಹಾರ ಘೋಷಣೆ ಮಾಡದಿರುವುದು ಖಂಡನಿಯ. ನೊಂದ ಕುಟುಂಬದವರಿಗೂ ನಮಗೂ ಸಂಬಂಧವಿಲ್ಲಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಕೂಡಲೇ ಆ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನೊಂದ ಕುಟುಂಬದವರಿಗೆ ಪರಿಹಾರ ನೀಡಬೇಕು. ಪ್ರಕರಣದ ತನಿಖೆಯನ್ನು ಶೀಘ್ರದಲ್ಲೇ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ರವಿ, ಗುರುಬಸಪ್ಪ, ಸಿದ್ದೇಗೌಡ, ಗೋಪಿ, ಬಾಬು, ಸಿದ್ದಪ್ಪ, ಗೋವಿಂದರಾಜು, ಹರೀಶ್, ಮಾದಪ್ಪ, ಅರವಿಂದ್, ಸುನಿಲ್, ಸ್ವಾಮಿ, ಶಿವಣ್ಣ ಮೊದಲಾದವರು ಇದ್ದರು.ನಟ ದರ್ಶನ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಚಿತ್ರ ನಟ ದರ್ಶನ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಸಚಿನ್ ನಾಯಕ್ ಆಗ್ರಹಿಸಿದ್ದಾರೆ.
ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗ ಬೇಕು, ದರ್ಶನ್ ತನ್ನ ಅಭಿಮಾನಿಗಳ ಮುಖಾಂತರ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಚಿತ್ರ ಹಿಂಸೆ ನೀಡಿ ಹೊಡೆದು ಸಾಯಿಸಿರುವುದು ರಾಕ್ಷಸ ಪ್ರವೃತ್ತಿ. ಕೊಲೆಗೆ ಸಹಕರಿಸಿದ ಎಲ್ಲರಿಗೂ ಘೋರ ಶಿಕ್ಷೆ ವಿಧಿಸಬೇಕು. ಈ ಪ್ರಕರಣದಲ್ಲಿ ಕೊನೆಯವರೆಗೂ ಚುರುಕಾಗಿ ಹಾಗೂ ಕಾನೂನುಬದ್ಧವಾಗಿ ಕೆಲಸ ಮಾಡಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತಿಳಿಸಿದ್ದಾರೆ.