ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರು ಅತ್ಯುತ್ತಮ ಸಹಕಾರ ನೀಡಿ ನನ್ನನ್ನು ಉತ್ತಮ ಜಿಲ್ಲಾಧಿಕಾರಿಯಾಗಿ ಮಾಡಿದ್ದಾರೆ ಎಂದು ಆರೋಗ್ಯ ಇಲಾಖೆ ಆಯುಕ್ತರಾಗಿ ಪದೋನ್ನತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರು ಅತ್ಯುತ್ತಮ ಸಹಕಾರ ನೀಡಿ ನನ್ನನ್ನು ಉತ್ತಮ ಜಿಲ್ಲಾಧಿಕಾರಿಯಾಗಿ ಮಾಡಿದ್ದಾರೆ ಎಂದು ಆರೋಗ್ಯ ಇಲಾಖೆ ಆಯುಕ್ತರಾಗಿ ಪದೋನ್ನತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮತ್ತು ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಅವರಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪರಿಭಾವಿತ(ಡೀಮ್ಡ್) ಅರಣ್ಯ ಪ್ರದೇಶ ಸುಮಾರು 7000 ಎಕರೆಗೆ ಸಂಬಂಧಿಸಿದ ವಿಷಯ ಬಗೆಹರಿಸಲು ಸಾಕಷ್ಟು ಕೆಲಸಗಳಾಗಿದ್ದು, ಇದೀಗ ತಂಡ ರಚಿಸಲಾಗಿದೆ. ಹಾಗೂ ನೆನೆಗುದಿಗೆ ಬಿದ್ದಿದ್ದ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕೆಲಸ ತಾರ್ಕಿಕ ಅಂತ್ಯ ತಲುಪುತ್ತಿರುವುದು ಉತ್ತಮ ವಿಷಯ. ಅರಣ್ಯ ಇಲಾಖೆಯಲ್ಲಿ ಎಲ್ಲ ಅಧಿಕಾರಿಗಳು ಅತ್ಯುತ್ತಮವಾಗಿ ಬೆಂಬಲ ನೀಡಿದ್ದಾರೆ. ಸುಲಭವಾಗಿ ಕೆಲಸಗಳನ್ನು ಮಾಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೌಕಕರಿಗೆ ಉತ್ತೇಜನ ನೀಡುತ್ತಿದೆ. ಎಲ್ಲ ಇಲಾಖೆಗಳು ಅತ್ಯುತ್ತಮ ಕೆಲಸ ಮಾಡಿ ಬೆಂಬಲ ನೀಡಿದ್ದೀರಿ. ನೂತನವಾಗಿ ಬಂದಿರುವ ಡಿಸಿ ಮತ್ತು ಎಸ್‌ಪಿ ಗಳು ಉತ್ತಮ ಅನುಭವ ಇರುವ ಅಧಿಕಾರಿಗಳು. ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಾರೆ. ಅವರಿಗೂ ಸಹ ನಿಮ್ಮೆಲ್ಲರ ಬೆಂಬಲ ಹೀಗೇ ಇರಲಿ ಎಂದರು.
ಜಿ.ಪಂ. ಸಿಇಒ ಎನ್.ಹೇಮಂತ್ ಮಾತನಾಡಿ, ‘ದಿ ಬೆಸ್ಟ್ ಡಿಸಿ’ ಜೊತೆ ಕೆಲಸ ಮಾಡುವ ಅವಕಾಶ ನನಗೆ ದೊರೆತಿದ್ದು ನನ್ನ ಪುಣ್ಯ. ಯಾವುದೇ ರೀತಿಯ ಕ್ಲಿಷ್ಟಕರ ಸಮಸ್ಯೆಗಳಿದ್ದರೂ ಸರಳವಾದ ಪರಿಹಾರಗಳನ್ನು ಹುಡುಕುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ವಾತಂತ್ರ್ಯ ನೀಡಿದ್ದು, ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡುತ್ತಿದ್ದುದು ನಮಗೆ ಸ್ಪೂರ್ತಿಯಾಗಿತ್ತು ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಸಮಸ್ಯೆಗಳ ವಿಷಯಗಳನ್ನು ಸಮರ್ಥವಾಗಿ ಎದುರಿಸಿ, ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಡಿಸಿಎಫ್ ಅಜಯ್, ಡಿಎಚ್‌ಒ ಡಾ.ನಟರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಪ್ರೊಬೇಷನರಿ ಅಧಿಕಾರಿ ನಾಗೇಂದ್ರ ಬಾಬು, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿಗಳಾದ ಸತ್ಯನಾರಾಯಣ, ಯತೀಶ್, ಜಿಲ್ಲೆ ಅಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.-----
ವಿಡಿಯೋ ಮೂಲಕ ಸಂದೇಶ ನೀಡಿದ ಸಿ.ಎಸ್.ಷಡಾಕ್ಷರಿವಿಡಿಯೋ ಮೂಲಕ ಸಂದೇಶ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಗುರುದತ್ತ ಹೆಗಡೆಯವರು ಓರ್ವ ದಕ್ಷ, ಪ್ರಾಮಾಣಿಕ ಆಡಳಿತಗಾರ. ಜನರ ಸೇವೆಯಲ್ಲಿ ಅತ್ಯಂತ ಕಳಕಳಿ, ಬದ್ದತೆ ಹೊಂದಿದ್ದು, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಾ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಸರ್ಕಾರಿ ನೌಕರರ ವಿಚಾರದಲ್ಲಿ ಅವರ ನಿಲುವು ಸಹ ಉತ್ತಮವಾಗಿದೆ ಎಂದರು.
---ಗುರುದತ್ತ ಹೆಗಡೆಯವರು ಎಲ್ಲರಿಗೂ ನಿಲುಕುವಂತಹ ದಕ್ಷ ಅಧಿಕಾರಿ. ಹಾಗೂ ಉತ್ತಮ ಮಾರ್ಗದರ್ಶಕರು ಕೂಡ ಆಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ತೆಗೆದುಕೊಳ್ಳಲು ಅವರೇ ಸ್ಪೂರ್ತಿ. ಜಿಲ್ಲೆಯಲ್ಲಿ ಅವರು ಅದ್ಬುತ ಕೆಲಸ ಮಾಡಿದ್ದು ಅದು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದ್ದು, ಮುಂದೆಯೂ ಕೂಡ ನಿಮ್ಮ ಸಹಕಾರ ಪೊಲೀಸ್ ಇಲಾಖೆ ಜೊತೆ ಸದಾ ಇರಲಿ.
-ಬಿ. ನಿಖಿಲ್ , ನೂತನ ಎಸ್ಪಿ.--
ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಮಾಧ್ಯಮಗಳೊಂದಿಗೆ ಅನ್ಯೋನ್ಯತೆ ಮತ್ತು ಸಮನ್ವಯತೆಯೊಂದಿಗೆ ಕೆಲಸ ಮಾಡುವ ಹಂಬಲ ಹೊಂದಿದ್ದು, ಎಲ್ಲ ಇಲಾಖೆಗಳು ಒಂದು ಕುಟುಂಬವಾಗಿ ಕಾರ್ಯವೆಸಗೋಣ.-ಪ್ರಭುಲಿಂಗ ಕವಳಿಕಟ್ಟಿ, ನೂತನ ಜಿಲ್ಲಾಧಿಕಾರಿ.
-------ನನ್ನ ಹೆಸರಿಗೆ ಕಾರಣ ಈ ಜಿಲ್ಲೆ: ಸಾಗರ ಹತ್ತಿರ ವರದಾಶ್ರಮದ ಶ್ರೀಧರ ಸ್ವಾಮಿಗಳ ಅನುಯಾಯಿಗಳು ನನ್ನ ತಂದೆ ತಾಯಿ. ನಾನು ದತ್ತ ಜಯಂತಿಯಂದು ಹುಟ್ಟಿದ ಕಾರಣ ಗುರುದತ್ತ ಎಂದು ಹೆಸರಿಟ್ಟಿದ್ದು, ಈ ಜಿಲ್ಲೆ ನನಗೆ ಹೆಸರನ್ನು ನೀಡಿರುವುದನ್ನು ಸದಾ ಸ್ಮರಿಸುತ್ತೇನೆ.
-ಗುರುದತ್ತ ಹೆಗಡೆ, ನಿಕಟಪೂರ್ವ ಜಿಲ್ಲಾಧಿಕಾರಿ.