ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ಸರ್ಕಾರಿ ನೌಕರರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆಗೂ ಗಮನಹರಿಸಬೇಕು. ಕೆಲಸದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ನೌಕರರಿಗೂ ಕೂಡ ಅನೇಕ ಸಮಸ್ಯೆ, ಕುಂದು- ಕೊರತೆಗಳು ಎದುರಾಗುತ್ತವೆ. ತಾಲೂಕು ಸರ್ಕಾರಿ ನೌಕರರ ಸಂಘವು ನೌಕರರ ಹಿತಕಾಯುವ ಜೊತೆಗೆ ಹಲವು ಬಗೆಯ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ಕಾರಿ ನೌಕರರ ಹಿತಾಸಕ್ತಿ ಕಾಯುವ ಜೊತೆಗೆ ಅವರಿಗೆ ಸಿಗಬಹುದಾದ ಸೇವಾ ಸೌಲಭ್ಯಗಳನ್ನು ಒದಗಿಸುವ ಮತ್ತು ಕಾರ್ಯಕ್ಷೇತ್ರದಲ್ಲಿ ಅತ್ಯಂತ ನಿರ್ಭೀತಿಯಿಂದ ಸ್ವತಂತ್ರವಾಗಿ ಕೆಲಸ ಮಾಡಲು ಸರ್ಕಾರಿ ನೌಕರರ ಸಂಘವು ಬೆನ್ನೆಲುಬಾಗಿ ನಿಂತು ನೌಕರರಿಗೆ ಬೇಕಿರುವ ಅವಕಾಶಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ಒಳಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ದಿನ ಮತ್ತು ಸರ್ಕಾರಿ ನೌಕರರ ಸಂಘ ಹೊರತಂದಿರುವ ಪ್ರಸಕ್ತ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

೧೦೫ ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ನೌಕರರ ಸಂಘವು ದೇಶಾದ್ಯಂತ ಮಾದರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ನೌಕರರ ಹಿತಕಾಯುವ ಕೆಲಸ ಮಾಡುತ್ತಿದೆ. ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ಬಲಾಢ್ಯವಾಗಿರುವ ನಮ್ಮ ಸಂಘ ಮಾದರಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಒಂದು ವರ್ಷದ ಅವಧಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಹತ್ತಾರು ಬಗೆಯ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲ ಸರ್ಕಾರಿ ನೌಕರರು ಒತ್ತಡ ರಹಿತವಾಗಿ ಕೆಲಸ ಮಾಡಬೇಕೆಂಬುದೇ ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮತ್ತು ಆದರ್ಶ ಜೀವನವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡರೆ ದ್ವೇಷ, ಅಸೂಯೆ ಬಿಟ್ಟು ಸುಂದರವಾದ ಬದುಕು ನಡೆಸಬಹುದು. ಮನುಷ್ಯ ಹುಟ್ಟಿದ ನಂತರ ದೇಶ, ರಾಜ್ಯ,ಜಾತಿ ಧರ್ಮ ಎಲ್ಲವನ್ನೂ ತಂದಿಟ್ಟು ಸಂಕುಚಿತಗೊಳಿಸಲಾಗುತ್ತಿದೆ. ಕುವೆಂಪು ಅವರ ಆದರ್ಶ, ತತ್ವಗಳನ್ನು ಪಾಲನೆ ಮಾಡಿದರೆ ಭವ್ಯ ಭಾರತ ಮತ್ತು ರಾಮರಾಜ್ಯ ನಿರ್ಮಾಣ ಮಾಡಬಹುದು ಎಂದರು.

ಪ್ರಧಾನ ಉಪನ್ಯಾಸ ನೀಡಿದ ತಾಲೂಕಿನ ಕೆಂಬಾರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮರಾಯಿಗೌಡ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ದೇಶದಾದ್ಯಂತ ಇರುವ ಎಲ್ಲಾ ಸ್ಥಾನ- ಮಾನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ದೊರಕಿಸಿಕೊಟ್ಟಿದ್ದಾರೆ. ಕುವೆಂಪು ಅವರ ಆದರ್ಶ ಮತ್ತು ತತ್ವಗಳನ್ನು ಸಾರ್ವಕಾಲಿಕವಾಗಿ ನಡೆಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ಸರ್ಕಾರಿ ನೌಕರರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆಗೂ ಗಮನಹರಿಸಬೇಕು. ಕೆಲಸದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ನೌಕರರಿಗೂ ಕೂಡ ಅನೇಕ ಸಮಸ್ಯೆ, ಕುಂದು- ಕೊರತೆಗಳು ಎದುರಾಗುತ್ತವೆ. ತಾಲೂಕು ಸರ್ಕಾರಿ ನೌಕರರ ಸಂಘವು ನೌಕರರ ಹಿತಕಾಯುವ ಜೊತೆಗೆ ಹಲವು ಬಗೆಯ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ತಾಪಂ ಇಒ ಸತೀಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಸಿಡಿಪಿಒ ಕೃಷ್ಣಮೂರ್ತಿ, ಉಪ ತಹಸೀಲ್ದಾರ್ ಮಂಜುನಾಥ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವಿನಯ್, ಪದಾಧಿಕಾರಿಗಳಾದ ಮಧುಕುಮಾರ್, ಶಿವಕುಮಾರ್, ಸಾವಿತ್ರಿ ಬಾಪುಲೆ ಸಂಘದ ಜಿಲ್ಲಾಧ್ಯಕ್ಷೆ ಸರಸ್ವತಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್ ಸೇರಿ ವೃಂದ ಸಂಘಗಳ ಪದಾಧಿಕಾರಿಗಳು ಮತ್ತು ಸರ್ಕಾರಿ ನೌಕರರು ಇದ್ದರು.