ರಾಜ್ಯದ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯು ಫೆ.24 ಮತ್ತು 25ರಂದು ಎರಡು ದಿನ ಸಂಪ್ರದಾಯ, ಪದ್ಧತಿಯಿಂದ ಅದ್ಧೂರಿಯಾಗಿ ನಡೆಸಲು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯು ಫೆ.24 ಮತ್ತು 25ರಂದು ಎರಡು ದಿನ ಸಂಪ್ರದಾಯ, ಪದ್ಧತಿಯಿಂದ ಅದ್ಧೂರಿಯಾಗಿ ನಡೆಸಲು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಸಮಿತಿ ಕಾರ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶ್ರೀ ದುಗ್ಗಮ್ಮ ಜಾತ್ರೆಗೆ ದಿನಾಂಕ ನಿಗದಿಪಡಿಸಿ, ಜಾತ್ರೆಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಇವಾಗಿನಿಂದಲೇ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ದೇವಸ್ಥಾನದ ಪುರೋಹಿತ ನಾಗರಾಜ ಜೋಯಿಸ್ ಸಭೆಯ ಆರಂಭದಲ್ಲಿ ಮಾತನಾಡಿ, ಜ.20ರ ಮಂಗಳವಾರ ಬೆಳಿಗ್ಗೆ 10.30ರಿಂದ 11.30ರ ಶುಭ ಮುಹೂರ್ತದಲ್ಲಿ ಹಂದರಗಂಬ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಸಿದ್ಧತಾ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. ಫೆ.22ರಂದು ಬೆಳಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಕಲಾಪಗಳು ಪದ್ಧತಿ, ಸಂಪ್ರದಾಯದಂತೆ ನೆರವೇರಲಿವೆ. ಅದೇ ಸಂಜೆ ಕೋಣದ ಸಮೇತ ಜಾತ್ರೆಯ ಅಧಿಕೃತ ಘೋಷಣೆ(ಸಾರುವುದು) ಮಾಡಲಾಗುವುದು ಎಂದರು.ಫೆ.23, 24ರಂದು ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಅಲಂಕಾರ, ಪೂಜಾ ಕೈಂಕರ್ಯ ನೆರವೇರಲಿವೆ. ಫೆ.25ರ ಬೆಳಿಗ್ಗೆ ಸಂಪ್ರದಾಯದಂತೆ ಊರಿನಲ್ಲಿ ಚರಗ ಚೆಲ್ಲುವ ಕಾರ್ಯ ನೆರವೇರಲಿದೆ. ಜಾತ್ರೆಯ ವಿಶೇಷ ಸಂಪ್ರದಾಯದಂತೆ ಫೆ.24ರ ಮಧ್ಯರಾತ್ರಿ 12ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ನಂತರ ಬಧವಾರ ಬೆಳಿಗ್ಗೆ 10ಕ್ಕೆ ಚರಗ ವಾಪಾಸ್ಸು ಬಂದ ನಂತರ ಮಹಾ ಮಂಗಳಾರತಿ ನೆರವೇರಿಸಿ, ರೈತರಿಗೆ, ಬಾಬುದಾರರಿಗೆ ಪ್ರಸಾದ ವಿನಿಯೋಗ ಮಾಡುವ ಮೂಲಕ ಜಾತ್ರೆಯ ಮುಖ್ಯ ಘಟ್ಟಕ್ಕೆ ತೆರೆ ಬೀಳಲಿದೆ ಎಂದು ಸಭೆಗೆ ಪುರೋಹಿತ ನಾಗರಾಜ ಜೋಯಿಸ್ ತಿಳಿಸಿದರು.
ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್ ಮಾತನಾಡಿ, ದುಗ್ಗಮ್ಮ ಎಲ್ಲರಿಗೂ ತಾಯಿಯೇ, ನಾವೆಲ್ಲರೂ ಸೇರಿ ಊರಿನ ತಾಯಿಯ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸೋಣ ಎಂದರು.ಸಮಿತಿಯ ಸದಸ್ಯ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ, ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮಿತಿ ನಡೆಸುತ್ತಿರುವ ಶ್ರೀ ದುರ್ಗಾಂಬಿಕಾ ಶಾಲೆ 47 ವರ್ಷದಿಂದಲೂ ನಡೆಯುತ್ತಿದೆ. ಶಾಲೆಯಲ್ಲಿ 2 ವಿಭಾಗಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ. ಎರಡೂ ವಿಭಾಗಗಳನ್ನು ಸೇರಿಸಿಕೊಂಡು, ಒಂದೇ ಕೋೆಯಲ್ಲಿ ಪಾಠ ಮಾಡುವ ಪರಿಸ್ಥಿತಿ ಇದೆ. ಎರಡೂ ಸೆಕ್ಷನ್‌ಗಳನ್ನು ಸೇರಿಸಿಕೊಂಡು, ಒಂದೇ ಕೋಣೆಯಲ್ಲಿ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಿತಿಯಂದ ವರ್ಷಕ್ಕೆ 8.40 ಲಕ್ಷ ರು. ನೀಡಲಾಗುತ್ತಿದೆ. ಆದರೆ, ಶಾಲೆಯ ಕಡೆಗೆ ಸಮಿತಿಯವರು ಗಮನ ಹರಿಸುತ್ತಿಲ್ಲ ಎಂದರು.
ಸಮಿತಿ ಪದಾಧಿಕಾರಿಗಳಾದ ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ, ಮಾಜಿ ಮೇಯರ್ ಎಲ್.ಡಿ.ಗೋಣೆಪ್ಪ, ವಿನಾಯಕ ಪೈಲ್ವಾನ, ದೂಡಾ ಮಾಜಿ ಅಧ್ಯಕ್ಷ ಮಾಲತೇಶ ಜಾಧವ್, ಕರಿಗಾರ ಬಸಪ್ಪ, ಹನುಮಂತರಾವ್ ಸಾಳಂಕೆ, ಉಮೇಶ ರಾವ್ ಸಾಳಂಕೆ, ಹನುಮಂತರಾವ್, ರಾಮಕೃಷ್ಣ, ಗೌಡ್ರ ವಿಶ್ವನಾಥ, ಸೊಪ್ಪಿನ ಗುರುರಾಜ, ಎಲ್.ಎಂ.ಹನುಮಂತಪ್ಪ, ಎಲ್‌ಎಂಎಚ್ ಸಾಗರ್, ಸುರೇಶ, ಕರಿಬಸಪ್ಪ, ಕವಿರಾಜ, ಶಂಕರರಾವ್ ಸಿಂಧೆ, ಸುರೇಶ ಗೌಡ್ರು, ಸಿಪಿಐ ಉಮೇಶ, ಧರ್ಮದರ್ಶಿಗಳು, ಗೌಡರು, ಶಾನಬೋಗರು, ರೈತರು, ಬಣಕಾರರು, ಕುಂಬಾರರು, ತಳವಾರರು, ಬಡಿಗೆಯವರು, ಮಡಿವಾಳರು, ಬಾಬುದಾರರು, ಕಾರ್ಯಕರ್ತರು, ಸದ್ಭಕ್ತರು ಇತರರು ಇದ್ದರು.