ಭರವಸೆ ಸಾಕು-ಬೆಳಕು ಬೇಕೆಂದು ಜನರ ಪಟ್ಟು
ಕನ್ನಡಪ್ರಭ ವಾರ್ತೆ ಹನೂರು
ಮೂಲಭೂತ ಸೌಲಭ್ಯ ಕಲ್ಪಿಸಲು ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಹಾಗಾಗಿ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಅಧಿಕಾರಿ ಬಿಂದ್ಯಾ ಆಗ್ರಹಿಸಿದರು.ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆದಗನಾಣೆ ಗ್ರಾಮದಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಧಳಕ್ಕೆ ಭೇಟಿ ನೀಡಿ ನಂತರ ಮಾತನಾಡಿದರು.ತಾವು ಈಗಾಗಲೇ ಮಾಡುತ್ತಿರುವ ಉಪವಾಸ ಸತ್ಯಾಗ್ರಹವನ್ನು ದಯಮಾಡಿ ಕೈಬಿಡಬೇಕು. ನಿಮ್ಮ ಗ್ರಾಮಕ್ಕೆ ಬೇಕಿರುವ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲು ಈಗಾಗಲೇ ಸೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಡನೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಈ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆಯನ್ನು ಕೈಬಿಡುವ ಮಾತೇ ಇಲ್ಲ. ಅಧಿಕಾರಿಗಳು ಬಂದು ಕೇವಲ ಭರವಸೆಯನ್ನ ಕೊಟ್ಟು ಅವರ ಭರವಸೆಯನ್ನು ನಂಬಿ ನಮಗೆ ಸಾಕಾಗಿದೆ. ಹಾಗಾಗಿ ಭರವಸೆ ಸಾಕು ಬೆಳಕು ಬೇಕು ಎಂದು ಪಟ್ಟುಹಿಡಿದರು.