ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Aug 19, 2025, 01:00 AM IST
ಪೋಟೋ 4 : ತ್ಯಾಮಗೊಂಡು ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಬಳ್ಳಗೆರೆ ಕೆಂಚನಪುರ ಹಾಗೂ ಕೊಡಿಗೇಹಳ್ಳಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಬಳ್ಳಗೆರೆ ಮತ್ತು ಕೆಂಚಿನಪುರ ಗ್ರಾಮಗಳಲ್ಲಿನ 1500 ಎಕರೆ ಭೂಪ್ರದೇಶವನ್ನು ಕ್ಲೀನ್ ಸಿಟಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿರುವ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಬಳ್ಳಗೆರೆ ಮತ್ತು ಕೆಂಚಿನಪುರ ಗ್ರಾಮಗಳಲ್ಲಿನ 1500 ಎಕರೆ ಭೂಪ್ರದೇಶವನ್ನು ಕ್ಲೀನ್ ಸಿಟಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿರುವ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಕೊಡಿಗೇಹಳ್ಳಿ ಗ್ರಾವಂ ವ್ಯಾಪ್ತಿಯಲ್ಲಿನ ಲಕ್ಷ್ಮಣಸ್ವಾಮಿ ಆಶ್ರಮದಿಂದ ಗ್ರಾಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು, ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ವಿರುದ್ಧ ಧಿಕ್ಕಾರವನ್ನು ಕೂಗುವ ಮೂಲಕ ಮುಂಬರುವ ಹೋರಾಟ ಕುರಿತು ಜಾಗೃತಿ ಮೂಡಿಸಿದರು.

ಕೃಷಿಯಿಂದಲೇ ಬದುಕು:

ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮೂರು ಗ್ರಾಮಗಳಲ್ಲಿ ಹೆಚ್ಚು ಕೃಷಿಭೂಮಿಯನ್ನು ಹೊಂದಿರುವ ರೈತರು ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೃಷಿ ಭೂಮಿಯನ್ನು ಬರಡು ಭೂಮಿ ಎಂದು ಪರಿಗಣಿಸಿ ಭೂಸ್ವಾಧೀನಕ್ಕೆ ಮುಂದಾಗಿರುವುದು ಬೇಸರದ ಸಂಗತಿ ಎಂದರು.

ಅರಣ್ಯ ಸಂಪತ್ತು:

ಭೂಸ್ವಾಧೀನ ಪ್ರಕ್ರಿಯೆಗೆ ಒಳಗೊಂಡಿರುವ ಗ್ರಾಮಗಳ ಸುತ್ತಮುತ್ತ ಸಾವಿರಾರು ಎಕರೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಭೂಸ್ವಾಧೀನದ 1500 ಎಕರೆ ಭೂಪ್ರದೇಶದಲ್ಲಿ 1000 ಎಕರೆ ಪ್ರದೇಶದಲ್ಲಿ ಅಡಕೆ, ತೆಂಗು, ಮಾವು ಇತರೆ ವಾಣಿಜ್ಯ ಬೆಳೆ, ರಾಗಿ, ತರಕಾರಿಗಳನ್ನು ಬೆಳೆಯಲಾಗುತ್ತದೆ. ಗ್ರಾಮಸಭೆಗಳಲ್ಲಿ ಯಾವುದೇ ಚರ್ಚೆ, ಸಮಾಲೋಚನೆ ನಡೆಸದೆ, ಏಕಾಏಕಿ ಭೂಸ್ವಾಧೀನದ ಮೂಲಕ ಜನರ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಭಾಗವಹಿಸಲ್ಲ:

ಗ್ರಾಮದ ಮುಖಂಡ ಬೈರೇಗೌಡ ಮಾತನಾಡಿ, ಸ್ಥಳೀಯ ಆಡಳಿತ ಗ್ರಾಪಂ ಮಟ್ಟದಲ್ಲಿ ಮೊದಲು ಭೂಸ್ವಾಧೀನದ ಕುರಿತು ಚರ್ಚಿಸಿ, ರೈತರ ಅಭಿಪ್ರಾಯವನ್ನು ಪಡೆದು ಸ್ವಾಧೀನ ಪ್ರಕ್ರಿಯೆ ಶುರು ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ಸರ್ಕಾರವೇ ನಿರ್ಧಾರ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಭೂಮಿ ಬೆಲೆ ನಿಗದಿಗೆ ಸಮಯ ನಿಗದಿಗಾಗಿ ಕರೆದಿರುವ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ. ಸಭೆಯಲ್ಲಿ ಯಾವ ರೈತರು ಭಾಗವಹಿಸುವುದಿಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಎಚ್ಚರಿಕೆ:

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ರೈತರ ಹೋರಾಟಕ್ಕೆ ಮಣಿದು ಸರ್ಕಾರ ಕೈಗೊಂಡ ನಿರ್ಧಾರ ಎಲ್ಲ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅನ್ವಯವಾಗಬೇಕು. ಇಲ್ಲವಾದಲ್ಲಿ ಚನ್ನರಾಯಪಟ್ಟಣ ರೈತರಂತೆ ಅದೇ ಮಾದರಿಯಲ್ಲಿ ಎಲ್ಲಾ ರೈತರು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಯಶೋಧ ರಮೇಶ್, ಮುಖಂಡರಾದ ಬಳ್ಳಗೆರೆ ರುದ್ರೇಶ್, ಹರೀಶ್, ಶ್ರೀಕಂಠಾಚಾರ್, ದೇವರಾಜು, ಗಂಗಹನುಮಯ್ಯ, ಕುಮಾರ್, ಎನ್.ಬೈರೇಗೌಡ, ಕೃಷ್ಣಮೂರ್ತಿ, ಅಶ್ವತ್, ನರಸಿಂಹರಾಜು ಮತ್ತಿತರರು ಭಾಗವಹಿಸಿದ್ದರು.

ಪೋಟೋ 4 :

ತ್ಯಾಮಗೊಂಡು ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಬಳ್ಳಗೆರೆ ಕೆಂಚನಪುರ ಹಾಗೂ ಕೊಡಿಗೇಹಳ್ಳಿ ರೈತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು