ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ತಾಲೂಕು ಕಚೇರಿ ಎದುರು ಮುಖಂಡರು, ವೃದ್ಧರು, ವಿಕಲಚೇತನರು, ವಿಧವಾ ವೇತನ ಪಡೆಯಲು ಸರ್ಕಾರ ಜಾತಿ, ಆದಾಯ ಪ್ರಮಾಣ ಪತ್ರ ಸೇರಿಂದತೆ ಇತರೆ ದಾಖಲಾತಿ ಕೇಳುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ವಿಕಲ ಚೇತನರ ಒಕ್ಕೂಟ ಜೆಡಿಎಸ್ ಘಟಕ ಅಧ್ಯಕ್ಷ ದಸರಗುಪ್ಪೆ ಮಂಜುನಾಥ್ ಮಾತನಾಡಿ, 60 ವರ್ಷ ಮೇಲ್ಪಟ್ಟ ನಾಗರಿಕರು ಮಾಸಾಶನವನ್ನು ಪಡೆಯುತ್ತಿದ್ದಾರೆ. ಅವರಿಗೆ 65 ವರ್ಷ ತುಂಬಿದ್ದರಿಂದ ಸಂಧ್ಯಾ ಸುರಕ್ಷ ಯೋಜನೆಯಡಿ (ಎಸ್‌ಎಸ್‌ವೈ) ಮಾಸಾಶನ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ ಎಂದರು.ಆದರೆ, ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೇಳುತ್ತಿದ್ದಾರೆ. ಬಹುತೇಕ ಫಲಾನುಭವಿಗಳ ಬಳಿ ಶಾಲೆ ದಾಖಲಾತಿ, ಮತ್ತೆ ಕೆಲವರ ಬಳಿ ಅವರ ಕುಟುಂಬದಲ್ಲಿನ ಯಾವುದೇ ಜಾತಿ ಪ್ರಮಾಣ ಪತ್ರಗಳಿಲ್ಲ. ಹೀಗಿರುವಾಗ ಅವರು ಜಾತಿ ಮತ್ತು ಆದಾಯ ಪ್ರಮಾಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರೈತ ಮುಖಂಡ ಮಂಜೇಶ್‌ಗೌಡ ಮಾತನಾಡಿ, ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲ ಚೇತನರು ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಮಾಸಾಶನ ನೀಡಲು ಅಧಿಕಾರಿಗಳು ಇನ್ನಿಲ್ಲದಂತಹ ದಾಖಲಾತಿಗಳನ್ನು ಕೇಳಿ ಮೇಲಿಂದ ಮೇಲೆ ಕಚೇರಿ ಅಲೆಯುವಂತೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಗುವನಹಳ್ಳಿ ಶಿವಸ್ವಾಮಿ, ಮಂಡ್ಯ ರಕ್ಷಣಾ ವೇದಿಕೆ ಶಂಕರ್‌ಬಾಬು, ಕೆಂಪೇಗೌಡ ಯುವ ಶಕ್ತಿ ವೇದಿಕೆ ತಾಲೂಕು ಅದ್ಯಕ್ಷ ಮಹೇಶ್, ಡಿ.ಎಂ ರವಿ, ಕುಮಾರಸ್ವಾಮಿ, ತಮ್ಮೇಗೌಡ, ಕೆ.ನಿಂಗೇಗೌಡ, ಕೆ.ಹೆಚ್ ಜಗದೀಸ್, ಸೇರಿದಂತೆ ಇತರರು ಇದ್ದರು.