ಉಡುಪಿ: ಫೆಲೋಶಿಪ್ ಆಫ್ ಉಡುಪಿ ಚರ್ಚಸ್ ವತಿಯಿಂದ ನಗರದ ಮಿಷನ್ ಕಾಂಪೌಂಡಿನಲ್ಲಿ ಶುಕ್ರವಾರ ಆರಂಭವಾದ ತಮಿಳುನಾಡಿನ ಮೋಹನ್ ಸಿ.ಲಾಝರಸ್ ಅವರ 3 ದಿನಗಳ ಪ್ರವಚನದ ಸಮಾಧಾನ ಮಹೋತ್ಸವದ ವಿರುದ್ಧ ಹಿಂದೂ ಜಾಗರಣಾ ವೇದಿಕೆಯು ಇಲ್ಲಿನ ಗೋವಿಂದದಾಸ ಕಲ್ಯಾಣ ಮಂಟಪದ ಬಳಿ ಪ್ರತಿಭಟನೆ ನಡೆಸಿತು.
ನಂತರ ಲಾಝರತ್ ವಿರುದ್ಧ, ಆತನ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಜಿಲ್ಲಾಡಳಿತ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ, ಸಮಾಧಾನ ಮಹೋತ್ಸವ ನಡೆಯುವ ಮಿಶನ್ ಕಂಪೌಂಡ್ ಕಡೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅವರನ್ನು ತಡೆದ ಪೊಲೀಸರು ಬಂಧಿಸಿ, ಮಣಿಪಾಲ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ ಶೆಟ್ಟಿ, ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾದ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ, ಜಿಲ್ಲಾ ಪ್ರಮುಖರಾದ ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ಮೋಹನ್ ಭಟ್, ತಾರಾ ಸತೀಶ್, ತಾರಾ ಆಚಾರ್ಯ ಮುಂತಾದವರು ಭಾಗವಹಿಸಿದ್ದರು.