ಕನ್ನಡಪ್ರಭ ವಾರ್ತೆ ಸವದತ್ತಿ
ಮುನವಳ್ಳಿ ಮತ್ತು ಸವದತ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಹಿಂದು ಹೆಣ್ಣು ಮಗಳ ಮೇಲಿನ ಕೃತ್ಯ ಅತ್ಯಂತ ಕ್ರೂರವಾಗಿದೆ. ಸರ್ಕಾರದ ನಿರ್ಲಕ್ಷದಿಂದ ರಾಜ್ಯದಲ್ಲಿ ಜನರಿಗೆ ಸುರಕ್ಷತೆ ಇಲ್ಲದಾಗಿದೆ. ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಎನ್‌ಕೌಂಟರ್ ಮಾಡುವ ಮೂಲಕ ಕೊಲೆಗಡುಕರಿಗೆ ಎಚ್ಚರಿಕೆ ನೀಡಬೇಕಾಗಿದೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಹೆತ್ತವರು ತೀವ್ರ ದುಃಖದಲ್ಲಿದ್ದು, ಈ ಕೊಲೆಗಡುಕ ರಾಕ್ಷಸನಿಗೆ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಹಿಂದು ಸಮಾಜದ ಮಗಳನ್ನು ಫಯಾಜ್ ಎಂಬ ದುಷ್ಟ ಭೀಕರವಾಗಿ ಕೊಲೆ ಮಾಡಿದ್ದು, ಕೊಲೆಗಾರನಿಗೆ ಗಲ್ಲುಶಿಕ್ಷೆ ವಿಧಿಸುವ ಮೂಲಕ ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ನೀಡಬೇಕೆಂದು ಆಗ್ರಹಿಸಿದರು.ಪಂಚನಗೌಡ ದ್ಯಾಮನಗೌಡರ ಮತ್ತು ಸೌರವ್ ಚೋಪ್ರಾ ಮಾತನಾಡಿ, ಲವ್ ಜಿಹಾದ್ ಕಾರಣಕ್ಕಾಗಿ ಅಮಾಯಕ ಮುಗ್ಧ ವಿದ್ಯಾರ್ಥಿನಿಯ ಕೊಲೆ ಮಾಡಿದಂತ ವಿಷ ಜಂತುಗಳನ್ನು ಹೊಸಕಿ ಹಾಕುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಈ ಘಟನೆ ಹಿನ್ನೆಲೆಯಲ್ಲಿ ಮುನವಳ್ಳಿಯಲ್ಲಿ ಮೂರು ದಿನಗಳ ಕಾಲ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿ ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ ಎಂದರು.
ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಲವ್ ಜಿಹಾದ್‌ನಿಂದಾಗಿ ಇಂದು ರಾಜ್ಯದಲ್ಲಿ ಅನೇಕ ಹಿಂದು ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದು, ಸರ್ಕಾರ ಹಿಂದು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬೃಹತ್ ಪ್ರತಿಭಟನೆ, ರಸ್ತೆ ತಡೆ: ಮುನವಳ್ಳಿಯ ಪಂಚಲಿಂಗೇಶ್ವರ ವೃತ್ತದಲ್ಲಿ ಬೆಳಗ್ಗೆಯಿಂದ ವಿವಿಧ ಸಂಘಟನೆಗಳ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸವದತ್ತಿಯ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಪಟ್ಟಣದ ವಿವಿಧ ಬೀದಿಗಳ ಮೂಲಕ ಸಂಚರಿಸಿ ಮಿನಿವಿಧಾನಸೌಧ ತಲುಪಿ ಆರೋಪಿತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.