-ಕಪ್ಪು ಬಾವುಟ ಪ್ರದರ್ಶಿಸಿ, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ
----
ಕನ್ನಡಪ್ರಭ ವಾರ್ತೆ ಶಹಾಪುರವಕ್ಫ್ ಮಸೂದೆಗೆ ಅಂಗೀಕಾರ ಮುಸ್ಲಿಮರ ವಿರೋಧಿ ಕಾಯ್ದೆಯಾಗಿದ್ದು, ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಮುಸ್ಲಿಂ ಒಕ್ಕೂಟ ಶಹಾಪುರದಲ್ಲಿ ಶನಿವಾರ ಭಾರಿ ಪ್ರತಿಭಟನೆ ನಡೆಸಿದರು. ನಗರದ ಹೊಸ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತದವರೆಗೆ ಕಪ್ಪು ಬಾವುಟ ಪ್ರದರ್ಶಿಸಿ, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.
ಎಸ್ಡಿಪಿಐನ ಜಿಲ್ಲಾಧ್ಯಕ್ಷ ಸೈಯದ್ ಹುಸೇನ್ ಇಸಾಕ್ ಖಾಲಿದ್ ಮಾತನಾಡಿ, ವಕ್ಫ್ ಮೊದಲಿನ ಕಾಯ್ದೆಯನ್ನು ರದ್ದುಪಡಿಸಲು ಹೊರಟಿರುವ ಬಿಜೆಪಿಗೆ ಮುಸ್ಲಿಮರ ಬಗ್ಗೆ ಇರುವ ದ್ವೇಷ ಭಾವನೆ ಗೊತ್ತಾಗುತ್ತದೆ ಎಂದರು.
ಹಿರಿಯ ನ್ಯಾಯವಾದಿ ಆರ್. ಚನ್ನಬಸು ಮಾತನಾಡಿ, ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸಿ ಈ ಹಿಂದೆ ಇದ್ದ ವಕ್ಫ್ ಕಾಯ್ದೆಯನ್ನು ಮರು ಸ್ಥಾಪಿಸುವಂತೆ ಸೂಕ್ತ ಆದೇಶ ಮಾಡಬೇಕೆಂದು ಅವರು ಒತ್ತಾಯಿಸಿದರು. ಕುರುಬ ಸಮಾಜದ ಹಿರಿಯ ಮುಖಂಡ ಡಾ. ಭೀಮಣ್ಣ ಮೇಟಿ ಮಾತನಾಡಿ, ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಮುಸ್ಲಿಮರನ್ನು ಮುಗಿಸುವ ತಂತ್ರಗಾರಿಕೆಯಾಗಿದೆ ಎಂದರು.
ಮಹಮ್ಮದ್ ರಫೀಕ್ ಚೌದ್ರಿ, ಸೈಯದ್ ಪಾಷಾ ಪಟೇಲ್, ಕೋಲಿ ಸಮಾಜದ ಹಿರಿಯ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ, ಹಿರಿಯ ವಕೀಲ ಚಂದ್ರಶೇಖರ್ ಜಾದವ್, ಶೇಕ್ ಖಲೀಮ್ ತವಕಲಿ ಮುಂತಾದ ಮುಖಂಡರು ಇದ್ದರು.
12ವೈಡಿಆರ್7 : ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮುಸ್ಲಿಂ ಒಕ್ಕೂಟದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.