ಸವಣೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಶಂಕರಗೌಡ ಹಿರೇಗೌಡ್ರ ಅವರನ್ನು ಯಾವುದೇ ಸಮಗ್ರ ತನಿಖೆಗೊಳಪಡಿಸದೆಯೇ ಏಕಾಏಕಿ ಅಮಾನತುಗೊಳಿಸಿರುವ ಕ್ರಮ ಖಂಡಿಸಿ, ಸಾರ್ವಜನಿಕರು ಮಂಗಳವಾರ ಪಟ್ಟಣದ ಕಂದಾಯ ಇಲಾಖೆ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರೊಬ್ಬರನ್ನು ಸೂಕ್ತ ತನಿಖೆ, ವಿಚಾರಣೆಯ ಪ್ರಕ್ರಿಯೆಗೊಳಪಡಿಸದೆ ದಿಢೀರನೆ ಅಮಾನತುಗೊಳಿಸಿರುವ ಕ್ರಮ ಅತ್ಯಂತ ಖಂಡನೀಯ ಮತ್ತು ಅನ್ಯಾಯಯುತವಾದುದು ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರ ವಿರುದ್ಧ ಈ ವರೆಗೆ ಯಾವುದೇ ಆರೋಪ ಅಥವಾ ದೂರು ದಾಖಲಾಗಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ವೈದ್ಯರಿಗೆ ತಮ್ಮ ಪರವಾಗಿ ಸಮಜಾಯಿಷಿ ನೀಡಲು ಸೂಕ್ತ ಅವಕಾಶ ಕಲ್ಪಿಸಿದ ಬಳಿಕವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು ಎಂದು ಪ್ರತಿಪಾದಿಸಿದರು.ಸಮರ್ಪಕ ತನಿಖೆಯಿಲ್ಲದೆ ನಡೆದಿರುವ ಈ ಅಮಾನತು ಕ್ರಮ ವೈದ್ಯರಿಗೆ ಮಾತ್ರವಲ್ಲದೆ, ಸಮಸ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೂ ತೀವ್ರ ಅನ್ಯಾಯ ಎಸಗಿದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಲ್ಲಿಸಲಾದ ಮನವಿಪತ್ರದಲ್ಲಿ, ವೈದ್ಯರ ವಿರುದ್ಧದ ಆರೋಪಗಳ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು ತನಿಖೆ ಪೂರ್ಣಗೊಳ್ಳುವ ಮುನ್ನವೇ ಕೈಗೊಂಡಿರುವ ಅಮಾನತು ಆದೇಶವನ್ನು ಕೂಡಲೇ ಮರುಪರಿಶೀಲಿಸಬೇಕು, ವೈದ್ಯರಿಗೆ ತಮ್ಮ ಪರವಾಗಿ ವಿವರಣೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಕ್ತ ಅವಕಾಶ ಕಲ್ಪಿಸಬೇಕು, ಪ್ರಕರಣದಲ್ಲಿ ಯಾವುದೇ ಲೋಪ ಕಂಡುಬಾರದಿದ್ದಲ್ಲಿ ವೈದ್ಯರನ್ನು ವಿಳಂಬವಿಲ್ಲದೆ ಕರ್ತವ್ಯಕ್ಕೆ ಮರುನೇಮಕ ಮಾಡಬೇಕು ಹಾಗೂ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಮನವಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.