ರೋಣ: ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದ ಇಬ್ಬರು ಶಿಕ್ಷಕರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಹೊಳೆಆಲೂರ ಶ್ರೀಕಲ್ಲೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಆಡಳಿತ ಮಂಡಳಿಯ ಕ್ರಮ ಖಂಡಿಸಿ ತಾಲೂಕಿನ ಹುಲ್ಲೂರ ಗ್ರಾಮದ ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರೌಢ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿದೆ.
ಸ್ಥಳಕ್ಕೆ ಪಿ.ಎಸ್. ಐ ಪ್ರಕಾಶ ಬಣಕಾರ ತೆರಳಿ ಪ್ರತಿಭಟನಾ ನಿರತರ ಮನವೊಲಿಸಲು ಪ್ರಯತ್ನಿಸಿದರು.
ಸುದ್ದಿ ತಿಳಿಯುತ್ತಿದಂತೆ ಬಿಇಒ ರುದ್ರಪ್ಪ ಹುರಳಿ ಹುಲ್ಲೂರಗೆ ತೆರಳಿ ಗ್ರಾಮಸ್ಥರ, ಪಾಲಕರ ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.ಈ ವೇಳೆ ಬಿಇಒ ರುದ್ರಪ್ಪ ಹುರಳಿ ಮಾತನಾಡಿ, ಈ ಶಾಲೆ ಹೊಳೆಆಲೂರಿನ ಶ್ರೀಕಲ್ಲೇಶ್ವರ ವಿದ್ಯಾ ಪ್ರಸಾರಕ ಸಮಿತಿಗೆ ಸೇರಿದ್ದಾಗಿದೆ. ಅಡಳಿತ ಮಂಡಳಿಗೆ ಶಾಲೆಯಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡುವುದು, ಅದಲು, ಬದಲು ಮಾಡುವುದು ಶಿಕ್ಷಣ ಇಲಾಖೆ ಗಮನಕ್ಕೆ ತರದೇ ನಿರ್ಧಾರ ಕೈಗೊಳ್ಳಲು ಬರುವದಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಗಮನಕ್ಕೆ ತರಬೇಕು. ಹುಲ್ಲೂರ ಇಬ್ಬರು ಶಿಕ್ಷಕರನ್ನು ಹೊಳೆಆಲೂರಗೆ, ಹೊಳೆಆಲೂರಿನ ಇಬ್ಬರು ಶಿಕ್ಷಕರನ್ನು ಹುಲ್ಲೂರಗೆ ವರ್ಗ ಮಾಡಿದರ ಬಗ್ಗೆ ನಮ್ಮಇಲಾಖೆ ಗಮನಕ್ಕೆ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ. ಕೂಡಲೇ ಈ ಕುರಿತು ಸಮಿತಿಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗುವದು. ಯಾವುದೇ ಕಾರಣಕ್ಕೂ ಶಿಕ್ಷಕರನ್ನು ಆ ಶಾಲೆಯಿಂದ, ಈ ಶಾಲೆಗೆ ಅದಲು ಬದಲು ಮಾಡದಂತೆ, ಈ ಹಿಂದೆ ಇದ್ದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುವದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು, ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಹುಲ್ಲೂರ ಗ್ರಾಮಸ್ಥರು, ವಿದ್ಯಾರ್ಥಿಗಳು ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.