ಶಿಗ್ಗಾಂವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಚಿವ ಸಂತೋಷ ಲಾಡ್ ಕುರಿತು ಅವಹೇಳನ ಹೇಳಿಕೆ ನೀಡಿರುವುದನ್ನು ಖಂಡಿಸಿ ಶಿಗ್ಗಾಂವಿ ಪಟ್ಟಣದಲ್ಲಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಂತೋಷ ಲಾಡ್ ಶಿಗ್ಗಾಂವಿ-ಸವಣೂರು ತಾಲೂಕಿನ ಅಭಿಮಾನಿಗಳ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿ ಮಾತನಾಡಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು. ಅವಹೇಳನಕಾರಿ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಕೆಳಮಟ್ಟದ ಮಾತುಗಳನ್ನು ಆಡಬಾರದು. ಅದು ಸರಿಯಾದ ವರ್ತನೆಯಲ್ಲ. ವಿಜಯೇಂದ್ರ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಅನುಭವಿ, ವಿದ್ಯಾವಂತರು, ರಾಜ್ಯದ ಜನತೆಗೆ ನೀಡಿದ ಸೇವೆ ಅಪಾರವಾಗಿದೆ. ಕೊರೋನಾ ಸಂದರ್ಭದಲ್ಲಿ ಬಡಕೂಲಿಕಾರರಿಗೆ ನೆರವಾಗಿದ್ದಾರೆ. ರೈತರಿಗೆ, ಕೃಷಿ ಕಾರ್ಮಿಕರಿಗೆ ನೆರವಾಗುವ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣರಾಗಿದ್ದಾರೆ. ಅಂತಹ ವ್ಯಕ್ತಿಗೆ ಅವಹೇಳನಕಾರಿ ಮಾತಗಳನ್ನು ಹಿಂಪಡೆಯಬೇಕು. ರಾಜ್ಯದ ಜನತೆ ಕ್ಷಮೆ ಕೇಳಬೇಕು. ಬಿಜೆಪಿ ಅವರ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಮುಸ್ತಾಕ ಮುಲ್ಲಾ, ಸಲಿಂ ಪಾರೂಖಿ, ಫಯಾಜ ಬೆಂಡಿಗೇರಿ, ಸುರೇಶ ಹರಿಜನ, ಆಂಜನೇಯ ಗುಡಗೇರಿ, ರುದ್ರೇಶ ಗುಡಗೇರಿ, ಶಂಭು ನೇರ್ತಿ, ಮಲ್ಲಿಕಾರ್ಜುನ ಇಳಗೇರಿ, ಅಶೋಕ ಮ್ಯಾಗೇರಿ, ಸಲಿಂ ಯಳವಟ್ಟಿ, ಇಬ್ರಾಹಿಂ ಮುಲ್ಲಾ, ರವಿ ಕೊಣಪ್ಪನವರ, ಮಾಂತೇಶ ಗುಡಮ್ಮನವರ, ಜಿಲಾನಿ ಮುಲ್ಲಾ , ಬೀರೇಶ ಜಟ್ಟೆಪ್ಪನವರ, ಎಂ. ಸುಬಾನಿ, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.