ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಹೊಳಲ್ಕೆರೆ ರಸ್ತೆ ಹೇರೂರು ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ಹೆದ್ದಾರಿ ರಸ್ತೆಗೆ ಟೋಲ್ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣ ಆಗಲು ಬಿಡುವುದಿಲ್ಲ ಎಂದು ರೈತರು ಸ್ಥಳಕ್ಕೆ ಆಗಮಿಸಿದ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಘೇರಾವ್ ಹಾಕಿದ ಪ್ರಸಂಗ ಹೇರೂರು ಗೇಟ್ ಬಳಿ ನಡೆಯಿತು.ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚು ವಾಸವಿರುವ ಹೇರೂರು, ಬಿಸನಹಳ್ಳಿ, ಮಾವಿನಕಟ್ಟೆ ಗ್ರಾಮದ ರೈತರು ಅರ್ಧ ಎಕರೆ, ಒಂದು ಎಕರೆ ಜಮೀನು ಹೊಂದಿದ ಹೆಚ್ಚು ರೈತರು ಇರುವ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ನಿರ್ಮಾಣ ಮಾಡಲು ಹೊರಟಿದ್ದು, ನಾವು ಯಾವುದೇ ಕಾರಣಕ್ಕೂ ಜಮೀನನ್ನು ಟೋಲ್ ನಿರ್ಮಿಸಲು ಬಿಟ್ಟು ಕೊಡುವುದಿಲ್ಲ. ರೈತರಿಂದ ಜಮೀನು ಪಡೆದು, ರೈತರಿಂದಲೇ ರಸ್ತೆ ಅಭಿವೃದ್ಧಿ ಸುಂಕ ವಸೂಲಿ ಮಾಡುವ ಇಂತಹ ರಸ್ತೆ ಬೇಡವೇ ಬೇಡ ಎಂದು ಅಗ್ರಹಿಸಿದರು.
ಹೊಸದುರ್ಗ ಹೊಳಲ್ಕೆರೆ ರಸ್ತೆಯ ಕೇವಲ 30 ಕಿ.ಮೀ. ವ್ಯಾಪ್ತಿ ಕ್ರಮಿಸುವ 15 ಕಿ.ಮೀ ಅಂತರದ ಮಧ್ಯ ಭಾಗದಲ್ಲಿರುವ ಹೇರೂರು ಗೇಟ್ ಬಳಿ ಟೋಲ್ ನಿರ್ಮಾಣ ಮಾಡಲು ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ಹಿಂದೆ ಇದ್ದ ಹಳೆಯ ರಸ್ತೆ ಉತ್ತಮವಾಗಿತ್ತು, ನಮ್ಮ ಮನವಿಗೆ ಶಾಸಕರು, ಹಾಗೂ ಜಿಲ್ಲಾಧಿಕಾರಿಗಳು ಸ್ಪಂದಿಸಿ ಬಡ ರೈತರ ನೋವನ್ನು ಪರಿಹರಿಸಬೇಕಿದೆ ಎಂದು ಹೇರೂರಿನ ನೂರಾರು ರೈತರು, ಮಹಿಳೆಯರು ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ರೈತರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ್ ವಿರೂಪಾಕ್ಷಪ್ಪ, ಪಾಲಾಕ್ಷಪ್ಪ, ಶಿವಕುಮಾರ್, ಸಿದ್ದಪ್ಪ, ದೊಡ್ಡರಂಗಪ್ಪ, ರಾಜಪ್ಪ, ದೊಡ್ಡ ಕಿಟ್ಟಪ್ಪ, ಹನುಮಂತಪ್ಪ, ಕವಿತಾ, ದ್ರಾಕ್ಷಯಣಮ್ಮ, ಸುಲೋಚನಮ್ಮ, ಶಿವಪ್ಪ, ತಿಪ್ಪೇಶ್, ಚಿಕ್ಕಪ್ಪ, ಲಕ್ಕಪ್ಪ, ರಾಮಪ್ಪ, ಮುಜೀಬ್ ನಿಜಾಮ್, ವೀರೇಶ್, ಗೋವಿಂದಪ್ಪ ಸೇರಿದಂತೆ ನೂರಾರು ರೈತರು ಹಾಜರಿದ್ದರು.ಇನ್ನು ಕೃಷಿಕ ಶಿವಕುಮಾರ್ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಮೀನು ರಹಿತ ರೈತರಿಗೆ ಜಮೀನು ಕೊಡುತ್ತಿರುವ ಇಂತಹ ಸಮಯದಲ್ಲಿ ನಮ್ಮಲ್ಲಿರುವ ಅಲ್ಪ-ಸಲ್ಪ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸ ಮಾಡಿಸಿಕೊಂಡು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರ ಜಮೀನು ವಶಪಡಿಸಿಕೊಳ್ಳಲು ಮುಂದಾ ಗಿದೆ. ಯಾವುದೇ ಕಾರಣಕ್ಕೂ ಪ್ರಾಣವನ್ನಾದರೂ ಕೊಟ್ಟೇವು ಜಮೀನು ನಾವು ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.