ಪ್ರವೇಶ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Jan 20, 2024, 02:02 AM IST
ಶಹಾಪುರ ನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಯಚೂರು ವಿಶ್ವವಿದ್ಯಾಲಯವು ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ನಗರದ ಸರಕಾರಿ ಪದವಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಶಹಾಪುರ: ರಾಯಚೂರು ವಿಶ್ವವಿದ್ಯಾಲಯವು ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ನಗರದ ಸರಕಾರಿ ಪದವಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ಶರಣು ಗೊಂದನವರ್ ಅವರು, ಈ ಕಾಲೇಜಿನಲ್ಲಿ 1800ಕ್ಕೂ ಹೆಚ್ಚಿನ ವಿದ್ಯಾರ್ಥಿ ಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ, ಇಲ್ಲಿ ವ್ಯಾಸಾಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಬಡ ಮಕ್ಕಳೇ ಹೆಚ್ಚಾಗಿದ್ದಾರೆ.

ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಪ್ರಾಂಶುಪಾಲರು ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಏನಾದರೂ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಕಾಲೇಜ್ ಡೆವಲಪ್ಮೆಂಟ್ ಗೆ 100 ರು. ಗಳು ತೆಗೆದುಕೊಳ್ಳಲಿ. ಆದರೆ, ಅದು ಬಿಟ್ಟು 500 ರು. ಗಳು ತೆಗೆದುಕೊಳ್ಳುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಕಾಲೇಜು ವಾರ್ಷಿಕ ಸಂಚಿಕೆ ತರಲು ಪ್ರತಿಯೊಬ್ಬ ವಿದ್ಯಾರ್ಥಿಯಿಂದ 100 ರು. ಪಡೆಯುತ್ತಾರೆ. ಆದರೆ ಒಬ್ಬ ವಿದ್ಯಾರ್ಥಿಗೆ ವಾರ್ಷಿಕ ಸಂಚಿಕೆ ಪುಸ್ತಕ ನೀಡುವುದಿಲ್ಲ. ಕೇಳಿದರೆ ನಿಮಗ್ಯಾಕೆ ಬೇಕು. ಪ್ರಿಂಟ್ ಆಗಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ವಾರ್ಷಿಕ ಸಂಚಿಕೆಗೆ 100 ರು. ಏಕೆ ತೆಗೆದುಕೊಂಡರೆಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಯಚೂರು ವಿಶ್ವವಿದ್ಯಾಲಯಕ್ಕೆ ಒಳಪಡುವ ಬೇರೆ ತಾಲೂಕು ಕೇಂದ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ 2710 ರು.ಗಳು ಇದೆ. ಆದರೆ, ನಾವು ವ್ಯಾಸಾಂಗ ಮಾಡುತ್ತಿರುವ ಈ ಕಾಲೇಜಿನಲ್ಲಿ 3590 ರು.ಗಳು ಪ್ರವೇಶ ಶುಲ್ಕ ಪಡೆದಿದ್ದಾರೆ. ಕೇಳಿದರೆ ಸಂಬಂಧಪಟ್ಟ ಸೆಕ್ಷನ್ ಕ್ಲರ್ಕ್ ಹಾಗೂ ಪ್ರಮುಖರು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೆ ಲೈಬ್ರರಿಗೆ ವಿದ್ಯಾರ್ಥಿಗಳು ಓದಲು ಹೋದರೆ ಒಳಗೆ ಸೇರಿಸಿಕೊಳ್ಳುವುದಿಲ್ಲ. ಹಾಗಾದರೆ ನಮ್ಮ ವಿದ್ಯಾರ್ಥಿಗಳ ಗೋಳು ಯಾರು ಕೇಳಬೇಕು. ಕೂಡಲೇ ಹೆಚ್ಚುವರಿ ಶುಲ್ಕ ವಾಪಸ್ ಕೊಡಬೇಕೆಂದು ಒತ್ತಾಯಿಸಿದರು.

ಕಾಲೇಜು ಪ್ರಾಂಶುಪಾಲ ಡಾ. ಸಂಗಪ್ಪ ಎಸ್. ರಾಂಪುರೆ ಮಾತನಾಡಿ, ಈ ಕಾಲೇಜಿನಲ್ಲಿ ಏಳು ಜನ ಕೆಲಸಗಾರರನ್ನು ಕಾಲೇಜು ಡೆವಲಪ್ಮೆಂಟ್ ಕಮಿಟಿ ವತಿಯಿಂದ ತೆಗೆದುಕೊಳ್ಳಲಾಗಿದೆ. ಈ ಕಮಿಟಿ (ಸಿಡಿಸಿ)ಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪ್ರವೇಶದ ಶುಲ್ಕದ ಜೊತೆ 500 ರು. ಹೆಚ್ಚುವರಿಯಾಗಿ ಹಣ ಪಡೆದುಕೊಂಡು ಆ ಹಣವನ್ನು ಈ ಕೆಲಸಗಾರರಿಗೆ ನೀಡಲಾಗುತ್ತಿದೆ. ಅಲ್ಲದೆ ವಾರ್ಷಿಕ ಸಂಚಿಕೆಗೆ ಒಂದು ಪ್ರತಿಗೆ 300 ತನಕ ಖರ್ಚು ಬರುತ್ತದೆ. ಆದರೆ, ನಾವು ಪ್ರತಿಯೊಬ್ಬ ವಿದ್ಯಾರ್ಥಿಯಿಂದ 100 ರು.ಗಳು ಪಡೆದು ಪ್ರಿಂಟ್ ಮಾಡಿದ ಪ್ರತಿಗಳನ್ನು ಲೈಬ್ರರಿಯಲ್ಲಿ ಇಡಲಾಗುತ್ತಿದೆ. ವಿದ್ಯಾರ್ಥಿಗಳು ಅಲ್ಲೇ ನೋಡಬಹುದು. ಕಾಲೇಜಿಗೆ ಅನುದಾನದ ಕೊರತೆ, ಖರ್ಚು ಜಾಸ್ತಿ ಇದೆ ಎಂದು ಮಾಹಿತಿ ನೀಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ