ಕನ್ನಡಪ್ರಭ ವಾರ್ತೆ ಹೊಸಪೇಟೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಬಿಜೆಪಿ ವಿಜಯನಗರ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು, ಮಂಗಳವಾರ ಎತ್ತಿನ ಬಂಡಿ ಹಾಗೂ ಸೈಕಲ್ ಸವಾರಿ ನಡೆಸಿ, ಪ್ರತಿಭಟಿಸಿದರು.ನಗರದ ಬಿಜೆಪಿ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಮಾತನಾಡಿ, ರಾಜ್ಯದ ಜನತೆಗೆ ಉಚಿತ ಭಾಗ್ಯಗಳ ಕೊಡುಗೆ ನೀಡಿರುವ ರಾಜ್ಯ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಇಂಧನದ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಿದೆ. ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇದರಿಂದ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗಲಿದೆ. ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಾಯಿಸಿದರು.
ಎಸ್.ಟಿ. ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ಬೆಲೆ ಏರಿಕೆಯಿಂದಾಗಿ ಬಡವರಿಗೆ ಆರ್ಥಿಕ ಹೊರೆಯಾಗಿದೆ. ತೈಲ ಬೆಲೆ ಏರಿಕೆಯಿಂದ ಎಲ್ಲ ವಿವಿಧ ವ್ಯಾಪಾರ, ವಹಿವಾಟುಗಳಿಗೆ ಆರ್ಥಿಕ ಹೊಡೆತ ಬೀಳಲಿದೆ. ರೈತರು, ಬಡಜನರ ಮೇಲೆ ಗಾಡವಾದ ಪರಿಣಾಮ ಬೀರಲಿದೆ. ತೈಲ ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್ ಮಾತನಾಡಿ, ಸರ್ಕಾರದ ಗ್ಯಾರೆಂಟಿಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಚುನಾವಣೆ ಬಳಿಕೆ ಬೆಲೆ ಏರಿಕೆ ಮಾಡಲಾಗಿದೆ. ಇದನ್ನು ಪಕ್ಷ ತೀವ್ರವಾಗಿ ಖಂಡಿಸಲಿದೆ. ಬೆಲೆ ಇಳಿಕೆ ಮಾಡುವವರಿಗೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ಮುಖಂಡರಾದ ಓದೋ ಗಂಗಪ್ಪ, ಶಂಕರ್ ಮೇಟಿ, ರಾಘವೇಂದ್ರ, ನಂಜನಗೌಡ, ಜಗದೀಶ್ ಕಮಟಗಿ, ನಾಗರಾಜ, ಅಶೋಕ್ ಜಿರೆ, ಅನುರಾಧ, ಬಸವರಾಜ, ಸಾಲಿ ಸಿದ್ಧಯ್ಯಸ್ವಾಮಿ, ಉಮಾಪತಿ. ರವಿಕಾಂತ್ ಸೇರಿ ನೂರಾರು ಕಾರ್ಯಕರ್ತರು ಇದ್ದರು.