ಅಂಚೆ ಕಚೇರಿಯಲ್ಲಿ ಹಣ ಕಳೆದುಕೊಂಡವರಿಂದ ಪ್ರತಿಭಟನೆ

KannadaprabhaNewsNetwork |  
Published : Feb 27, 2026, 01:45 AM IST
ಹಾಲಗಾನಹಳ್ಳಿ ಗ್ರಾಮಸ್ಥರು ನಗರದ ಪೋಸ್ಟ್ ಆಫೀಸ್ ಗೆ ಮುತ್ತಿಗೆ ಹಾಕಲು ಪ್ರಯತ್ನಿಸುವುದನ್ನು ತಡೆಯುತ್ತಿರುವ ಪೊಲೀಸರು | Kannada Prabha

ಸಾರಾಂಶ

ಕಳೆದ ಡಿಸೆಂಬರ್ 26ರಂದು ತಾಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ವಂಚನೆ ಮಾಡಿರುವ ಅಂಚೆ ಪೇದೆ ರಮ್ಯಾ ವಿರುದ್ಧ ಖಾತೆದಾರರು ಹಣ ವಾಪಾಸ್ ನೀಡಬೇಕು ಎಂದು ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ಕಳೆದುಕೊಂಡ ಖಾತೆದಾರರು ಗುರುವಾರ ನಗರದ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ ಡಿಸೆಂಬರ್ 26ರಂದು ತಾಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ವಂಚನೆ ಮಾಡಿರುವ ಅಂಚೆ ಪೇದೆ ರಮ್ಯಾ ವಿರುದ್ಧ ಖಾತೆದಾರರು ಹಣ ವಾಪಾಸ್ ನೀಡಬೇಕು ಎಂದು ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಆಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ಪ್ರಕರಣದಲ್ಲಿ ಅಧಿಕಾರಿಗಳು ಈವರೆಗೆ ಯಾವುದೇ ತನಿಖೆ ನಡೆಸಿಲ್ಲ. ಹಣ ಕಳೆದುಕೊಂಡ ನಮಗೆ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಆದರೆ ವಂಚನೆ ಮಾಡಿರುವವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ, ಹಣ ಕಳೆದುಕೊಂಡು ಎರಡು ತಿಂಗಳು ಕಳೆದರೂ ನಯಾ ಪೈಸೆ ವಾಪಸ್ ನೀಡಿಲ್ಲ, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಎಂದು ಆರೋಪಿಸಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.

ಹಣ ಕಳೆದುಕೊಂಡ ನಾಗಮಣಿ ಮಾತನಾಡಿ, ಅಂಚೆ ಕಚೇರಿಯಲ್ಲಿ ನಾನು 12 ಲಕ್ಷ ಹಣ ಕಟ್ಟಿದ್ದರೆ, 11 ಲಕ್ಷ ರುಪಾಯಿಗಳನ್ನು ರಮ್ಯಾ ತಿಂದು ಹಾಕಿದ್ದಾಳೆ, ಖಾತೆಯಲ್ಲಿ ಬರೀ 1 ಲಕ್ಷ ಮಾತ್ರ ತೋರಿಸುತ್ತಿದೆ. ಪೊಲೀಸರ ಮುಂದೆ ವಿಚಾರಣೆ ನಡೆಸಿದಾಗ ರಮ್ಯಾ ಹಣ ವಾಪಾಸ್ ನೀಡುವುದಾಗಿ ಹೇಳಿದ್ದಳು, ಒಂದು ದಿನದ ಬಳಿಕ ಕೇಳಿದಾಗ ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಸರಿಯಾಗಿ ಊಟ ನಿದ್ದೆಯಿಲ್ಲ, ಖಾಯಿಲೆಗಳಿಂದ ಬಳಲುತ್ತಿದ್ದೇನೆ. ಕಾಲಿಗೆ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಕೈಯಲ್ಲಿ ಹಣವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ. ಅಂಚೆ ಕಚೇರಿ ಅಧಿಕಾರಿಗಳಿಗೆ ಕೇಳೋಣ ಎಂದರೆ ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ. ಆದರೆ ಹಣ ವಂಚನೆ ಮಾಡಿರುವವರಿಗೆ ಸಾಥ್ ನೀಡುತ್ತಿದ್ದಾರೆ. ಯಾವ ರಾಜಕಾರಣಿ, ಯಾವ ಅಧಿಕಾರಿಯು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ, ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಗ್ರಾಮಸ್ಥ ರಂಜಿತ್ ಮಾತನಾಡಿ, ಈ ಪ್ರಕರಣ ಬೆಳಕಿಗೆ ಬಂದು ಎರಡು ತಿಂಗಳಿಗೆ ಕಳೆದರೂ ಯಾವೊಬ್ಬ ಅಧಿಕಾರಿಯು ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ, ಎರಡು ಬಾರಿ ಜಿಲ್ಲಾಧಿಕಾರಿ ಮತ್ತು ಎಸ್. ಪಿ ಅವರ ಬಳಿ ಹೋಗಿ ಬಂದಿದ್ದೇವೆ. ಕೂಡಿಟ್ಟಿದ್ದ 50 ಸಾವಿರದಿಂದ ಲಕ್ಷಾಂತರ ರುಪಾಯಿಗಳನ್ನು ಅಂಚೆ ಪೇದೆ ವಂಚನೆ ಮಾಡಿದ್ದರೂ ಸಹ ಯಾರು ಹಣ ವಾಪಾಸ್ ಕೊಡಿಸುತ್ತಿಲ್ಲ ಎಂದರು. ಸುಮಾರು ಎರಡು ಕೋಟಿಯಷ್ಟು ಹಣ ಬಡವರದ್ದೇ ಇದೆ. ವಂಚನೆ ಮಾಡಿರುವವರಿಗೆ ಪ್ರಭಾವಿಗಳು ರಕ್ಷಣೆ ನೀಡುತ್ತಿದ್ದಾರೆ, ಈಗಾಗಲೇ ಹಣದ ವಿಷಯಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ರಾಜಕಾರಣಿಗಳು ಬಂದು ನಾವಿದ್ದೇವೆ ಎನ್ನುತ್ತಾರೆ, ಮತ್ತೊಬ್ಬರು ಬಂದು ಫೇಸ್ಬುಕ್‌ನಲ್ಲಿ ವಿಡಿಯೋ ಹಾಕಿಕೊಂಡು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕೋಲಾರ ಅಂಚೆ ವಿಭಾಗದ ಡೆಪ್ಯೂಟಿ ಸೂಪರಿಡೆಂಟ್ ದಯಾನಂದ್ ಮಾತನಾಡಿ, ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ಕಳೆದುಕೊಂಡವರ ದಾಖಲೆಗಳ ಪರಿಶೀಲನೆಯ ತನಿಖೆ ನಡೆಯುತ್ತಿದೆ. ಖಾತೆದಾರರ 1,757 ಖಾತೆಗಳ ಪಾಸ್ ಬುಕ್ ಗಳನ್ನು ತನಿಖೆ ಮಾಡಲಾಗುತ್ತಿದೆ. 57 ಪಾಸ್ ಬುಕ್‌ಗಳಲ್ಲಿ ನ್ಯೂನ್ಯತೆ ಕಂಡುಬಂದಿದೆ, ಅಧಿಕಾರಿಗಳಿಂದ ವಿಚಾರಣೆ ಮಾಡಲಾಗುತ್ತಿದೆ, 57 ಪಾಸ್ ಬುಕ್‌ಗಳಿಂದ ಅಂದಾಜು 37 ಲಕ್ಷ ಹಣ ಸಿಕ್ಕಿದೆ. ಮತ್ತಷ್ಟು ಪಾಸ್ ಬುಕ್ ಗಳು ಸಿಗಬೇಕಿದೆ, ಸಿಕ್ಕಿದ ನಂತರ ಒಟ್ಟು ಎಷ್ಟು ಹಣ ಎಂದು ಖಚಿತವಾಗುತ್ತದೆ ಎಂದರು.ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ 1200ಕ್ಕೂ ಅಧಿಕ ಖಾತೆದಾರರು ಲಕ್ಷಾಂತರ ರುಪಾಯಿಗಳನ್ನು ಆರ್‌ಡಿ, ಎಫ್‌ಡಿ, ಸೇವಿಂಗ್ಸ್‌ನಲ್ಲಿ ಹಣ ಜಮೆ ಮಾಡಿದ್ದರು. ಅಂಚೆ ಪೇದೆ ರಮ್ಯಾ ವಂಚನೆ ಮಾಡಿದ್ದಾರೆ ಎಂದು ಖಾತೆದಾರರು ದೂರು ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಚೆ ಪೊಲೀಸ್ ಠಾಣೆಯಲ್ಲಿ ಪೇದೆ ರಮ್ಯಾ ಮತ್ತು ಖಾತೆದಾರರ ಸಮ್ಮುಖದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ, ಮತ್ತೊಂಡೆಡೆ ಅಂಚೆ ಕಚೇರಿಯ ಆರು ಜನರ ತಂಡ ಸಹ ಹಾಲಗಾನಹಳ್ಳಿ ಗ್ರಾಮಕ್ಕೆ ತೆರಳಿ ದಾಖಲೆಗಳ ಸಮೇತ ವಿಚಾರಣೆ ನಡೆಸಿ ಹಣ ಕಳೆದುಕೊಂಡವರ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

]ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿದರೆ ಜನ ನಂಬಲ್ಲ: ಶಾಸಕ ಗಣೇಶ್‌
ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ವಿಶೇಷ ತರಗತಿಗಳು ವರದಾನ: ಡಾ.ಯೋಗೇಶ್