ಕನ್ನಡಪ್ರಭ ವಾರ್ತೆ ದಾವಣಗೆರೆ
ನಂತರ ತಾಲೂಕಿನ ಆನಗೋಡು ಗ್ರಾಮದ ನೂತನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಾರ್ಗದ ಪರಿಶೀಲನೆ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ರೈಲ್ವೆ, ನೀರಿನ ವಿಚಾರದ ಕುರಿತಂತೆ ಅಭಿವೃದ್ಧಿ ಕಾರ್ಯ, ಸುರಕ್ಷತಾ ಕ್ರಮಗಳ ಜತೆಗೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಅರ್ಪಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆ ಬಾಲಭವನದಲ್ಲಿ ಮಕ್ಕಳಿಗಾಗಿ ಟಾಯ್ ಟ್ರೇನ್ ಸೇವೆ ಆರಂಭಿಸಬೇಕು. ದಾವಣಗೆರೆ–ಹರಿಹರ–ಬಳ್ಳಾರಿ ಮಾರ್ಗದಲ್ಲಿ ಸಂಚರಿಸುವ ಡಿಇಎಂಯು ರೈಲು ಸಂಖ್ಯೆ 07395/07396ರಲ್ಲಿ ಮಹಿಳಾ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಒದಗಿಸಬೇಕು. ಹರಿಹರ–ಚಿತ್ರದುರ್ಗ ಪ್ರಯಾಣಿಕರ ರೈಲನ್ನು ಮರು ಪ್ರಾರಂಭಿಸಬೇಕು. ರೈಲು ಸಂಖ್ಯೆ 12725-26 ಮತ್ತು 17325-26ಗಳಿಗೆ ಮಾಯಕೊಂಡ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ಹೇಳಿದರು.ಹನುಮನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು, ನಿರೀಕ್ಷಣಾ ಸ್ಥಳಕ್ಕೆ ಮೇಲ್ಛಾವಣಿ, ಕುರ್ಚಿ, ಶೌಚಾಲಯ ವ್ಯವಸ್ಥೆ, ಫ್ಲಾಟ್ ಫಾರಂ ಸಂಖ್ಯೆ 02ನ್ನು ವಿಸ್ತರಿಸಬೇಕು. ಹುಬ್ಬಳ್ಳಿ–ವಿಜಯವಾಡ ರೈಲನ್ನು ಯಶವಂತಪುರ ಜಂಕ್ಷನ್ ವರೆಗೆ ವಿಸ್ತರಿಸಬೇಕು. ರೈಲ್ವೇಗಾಗಿ ಭೂ ಸ್ವಾಧೀನಗೊಂಡ ಹಿನ್ನೆಲೆ ಮನವಿದಾರರ ಸಂಬಂಧಿ ರೇಣುಕಾ ಎಂಬುವರಿಗೆ ದಯಾಪಾಲನಾ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು. ದಾವಣಗೆರೆ ಲಿಂಗೇಶ್ವರ ದೇವಸ್ಥಾನ ಎದುರಿನ ಕೆಳ ಸೇತುವೆ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ಸುಮಾರು 5,700 ಹೆಕ್ಟೇರ್ (14,086 ಎಕರೆ) ಭೂಮಿಗೆ ನೀರು ತಲುಪುತ್ತಿಲ್ಲ. ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ವರ್ಷಕ್ಕೆ ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ಎದುರಿಸುತ್ತಿದ್ದು, ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಾಲುವೆಗಳಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಸ್ಪಂದಿಸಬೇಕು ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶೇಖರ್ ಎಚ್.ಟೇಕರಣ್ಣನವರ್, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಇತರ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.