ರಟ್ಟೀಹಳ್ಳಿ: ತಾಲೂಕಿನ ಕಡೂರ ಗ್ರಾಮದ ಮರಡಿ ಬಳಿಯ ಸುಮಾರು 25 ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುಮಾರು ವರ್ಷಗಳಿಂದ ಮನವಿ ಮಾಡಿದರೂ ಗ್ರಾಮ ಪಂಚಾಯತ್ ಪಿಡಿಓ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಪಿಡಿಒ ಕೊಠಡಿಯಲ್ಲಿ ಹಸು ಕಟ್ಟಿ ಪ್ರತಿಭಟಿಸಿದ ಘಟನೆ ಗುರುವಾರ ಜರುಗಿದೆ.
ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಕುಡಿಯುವ ನೀರಿನ ಎಂಜಿನಿಯರ್ ಭೇಟಿ ನೀಡಿ ಪೈಪಲೈನ್ ಮಾಡಲು ಎಸ್ಟಿಮೆಂಟ್ ಮಾಡಿದ್ದು ಒಂದು ವಾರದಲ್ಲಿ ಕುಡಿಯುವ ನೀರಿನ ಸಮಸ್ಯಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.
ರಂಗಪ್ಪ ಮಕರಿ, ಚನ್ನಪ್ಪ ದೊಡ್ಡಮನಿ, ಸಿದ್ದಪ್ಪ ಕುರುಬರ, ಅಣ್ಣಪ್ಪ ಕುರುಬರ, ಬೀರಪ್ಪ ಗೊಗ್ಗದ್, ದೇವರಾಜ ಕಮತಳ್ಳಿ, ದರ್ಶನ್ ಕರಡೆಣ್ಣವರ, ನಾಗಪ್ಪ ಇಂಗಳಗೊಂದಿ, ಲೋಕೇಶ ಕರಡೆಣ್ಣವರ ಮುಂತಾದವರು ಇದ್ದರು.ಕಡೂರ ಗ್ರಾಮದ ಮರಡಿಯಲ್ಲಿ ಕೆಲ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿತ್ತು ಆದರೂ ವಿಳಂಬವಾದ್ದರಿಂದ ಗ್ರಾಮಸ್ಥರು ನನ್ನ ಕೊಠಡಿಯಲ್ಲಿ ಹಸು ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸುಮಾರು ಅರ್ಧ ಗಂಟೆ ಸಮಸ್ಯೆಯಾಗಿದ್ದು, ವಿಷಯ ತಿಳಿದ ತಕ್ಷಣ ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಿದ್ದಾರೆ ಎಂದು ಪಿಡಿಒ ಪಿ.ಎಸ್. ಆರಾಧ್ಯಮಠ ಹೇಳಿದರು.