ಗದಗ: ನಗರದ ಘೋಷಿತ ಹಾಗೂ ಅಘೋಷಿತ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಯಲ್ಲಿ ನಗರಸಭೆಯು ತೋರುತ್ತಿರುವ ತಾರತಮ್ಯ ನೀತಿಯನ್ನು ಖಂಡಿಸಿ, ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯ ಪದಾಧಿಕಾರಿಗಳು ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಲಂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
2014ರಿಂದ ವಸತಿಗಾಗಿ ಹೋರಾಟ ನಡೆಸುತ್ತಿದ್ದರೂ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 348 ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. 2019ರಲ್ಲಿಯೇ ಶಾಸಕರಿಂದ ಮಂಜೂರಾತಿ ಪತ್ರ ಪಡೆದ ನೈಜ ಫಲಾನುಭವಿಗಳನ್ನು ಕೈಬಿಟ್ಟು, ಅನರ್ಹರಿಗೆ ಮನೆ ನೀಡಲಾಗಿದೆ ಎಂದರು.
ಮಹಿಳಾ ಸಮಿತಿ ಅಧ್ಯಕ್ಷೆ ಪರವೀಬಾನು ಹವಾಲ್ದಾರ್ ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಕೋಟ್ಯಂತರ ರೂಪಾಯಿ ಅನುದಾನ ಬಂದಿದ್ದರೂ ಸ್ಲಂ ಪ್ರದೇಶದ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಲ್ಲ. ಇಂದಿಗೂ ಸಾವಿರಾರು ಮಹಿಳೆಯರು ಬಯಲು ಶೌಚಾಲಯ ಅವಲಂಬಿಸುವಂತಾಗಿರುವುದು ನಗರಸಭೆಗೆ ನಾಚಿಕೆಗೇಡಿನ ಸಂಗತಿ ಎಂದರು.ಮುಖಂಡ ಶರಣಪ್ಪ ಸೂಡಿ ಮಾತನಾಡಿ, 2026- 27ನೇ ಸಾಲಿನ ಬಜೆಟ್‌ನಲ್ಲಿ ಸ್ಲಂ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡದಿದ್ದರೆ ಸಾವಿರಾರು ನಿವಾಸಿಗಳೊಂದಿಗೆ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.