ರೈತರ ಹೋರಾಟ ಹತ್ತಿಕ್ಕುವ ಯತ್ನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jun 27, 2025, 12:48 AM IST
ಸಿಕೆಬಿ-2  ನಗರದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಸಂಯುಕ್ತ ಹೋರಾಟ  ಹಾಗೂ ಸಮಾನ ಮನಸ್ಕ ಜನಪರ ಮತ್ತು ರೈತ, ದಲಿತ  ಸಂಘಟನೆಗಳು ಪ್ರತಿಭಟನೆ ನಡೆಸಿದವು.  | Kannada Prabha

ಸಾರಾಂಶ

ರೈತರು 1080 ದಿನಗಳಿಂದ ನಡೆಯುತ್ತಿರುವ ಹೋರಾಟ ಬೆಂಬಲಿಸಿ 40ಕ್ಕೂ ಹೆಚ್ಚು ರೈತಪರ, ಕನ್ನಡಪರ ಮತ್ತು ದಲಿತಪರ ಸಂಘಟನೆಗಳು ಹಮ್ಮಿ ಕೊಂಡಿದ್ದ ದೇವನಹಳ್ಳಿ ಚಲೋದಲ್ಲಿ ಭಾಗವಹಿಸಿದ್ದ ರೈತರು ಮತ್ತು ಸಂಘಟನೆಗಳ ಮುಖಂಡರನ್ನು ಸರ್ಕಾರ ಪೋಲಿಸರ ಮೂಲಕ ತಡೆದು ಬಂಧಿಸಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂಮಿಯನ್ನು ಕೆಐಡಿಬಿ ವಶಕ್ಕೆ ಪಡೆಯುವುದನ್ನು ವಿರೋಧಿಸಿ, ಬಲವಂತದ ಭೂಸ್ವಾಧೀನವನ್ನು ನಿಲ್ಲಿಸುವಂತೆ ಒತ್ತಾಯಿಸಿ ದೇವನಹಳ್ಳಿ ಚಲೋದಲ್ಲಿ ಪಾಲ್ಗೊಂಡಿದ್ದ ರೈತರನ್ನು ಬಂಧಿಸಿರುವುದನ್ನು ಖಂಡಿಸಿ ಗುರುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಸಂಯುಕ್ತ ಹೋರಾಟ ಹಾಗೂ ಸಮಾನ ಮನಸ್ಕ ಜನಪರ ಮತ್ತು ರೈತ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು.

ರೈತರು 1080 ದಿನಗಳಿಂದ ನಡೆಯುತ್ತಿರುವ ಹೋರಾಟ ಬೆಂಬಲಿಸಿ 40ಕ್ಕೂ ಹೆಚ್ಚು ರೈತಪರ, ಕನ್ನಡಪರ ಮತ್ತು ದಲಿತಪರ ಸಂಘಟನೆಗಳು ಹಮ್ಮಿ ಕೊಂಡಿದ್ದ ದೇವನಹಳ್ಳಿ ಚಲೋದಲ್ಲಿ ಭಾಗವಹಿಸಿದ್ದ ರೈತರು ಮತ್ತು ಸಂಘಟನೆಗಳ ಮುಖಂಡರನ್ನು ಸರ್ಕಾರ ಪೋಲಿಸರ ಮೂಲಕ ತಡೆದು ಬಂಧಿಸಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಭೂ ಸ್ವಾಧೀನ ಕೈಬಿಡಬೇಕು

ಈ ವೇಳೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ ಮಾತನಾಡಿ, ಸರ್ಕಾರ ಈ ರೀತಿ ರೈತರನ್ನು ಬೆದರಿಸಿ ಜಮೀನು ಕಿತ್ತುಕೊಳ್ಳುತ್ತೇವೆ ಎಂದುಕೊಂಡಿದ್ದರೆ ಅದು ಎಂದಿಗೂ ನಡೆಯದ ಕೆಲಸ. ರೈತರ ಜಮೀನು ಸ್ವಾಧೀನ ಕೈ ಬಿಡುವವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಾತು ತಪ್ಪಿದ ಮುಖ್ಯಮಂತ್ರಿ

ತಾವು ಸದಾ ಬಡವರ ಪರ, ನುಡಿದಂತೆ ನಡೆಯುವ ಸರ್ಕಾರ ಎಂದು ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, ಸ್ವತಃ ನಮ್ಮ ಧರಣಿ ವೇದಿಕೆಗೆ ಬಂದು, ಫಲವತ್ತಾದ ಕೃಷಿ ಭೂಮಿಗಳಲ್ಲಿ ಕೈಗಾರಿಕೆಗಳು ಮಾಡುವುದು ಸರಿಯಲ್ಲ, ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿ ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಪಾಲಾಗಲು ಬಿಡುವುದಿಲ್ಲ ಎಂದು ಹೇಳಿ ನಮ್ಮ ಹೋರಾಟವನ್ನು ಬೆಂಬಲಿಸಿದ್ದರು. ಈಗ ಜಾಣ ಕಿವುಡರಾಗಿಬಿಟ್ಟಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಜನಸೇನಾ ಸಂಸ್ಥಾಪಕ ಅಧ್ಯಕ್ಷೆ ಸಿ.ಎನ್.ಸುಷ್ಮಾಶ್ರೀನಿವಾಸ್, ದಸಂಸ ಅಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಧಾವೆಂಕಟೇಶ್, ಪ್ರಾಂತ್ಯರೈತ ಸಂಘದ ಬಿ.ಎನ್.ಮುನಿಕೃಷ್ಣಪ್ಪ, ರೈತಸಂಘದ ಲಕ್ಷ್ಮೀನಾರಾಯಣಪ್ಪ, ಹಳ್ಳೀಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ, ಜಿ.ಪಂ.ಮಾಜಿ ಸದಸ್ಯ ರಾಜಾಕಾಂತ್, ಕನ್ನಡಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ಮ ಮತ್ತಿತರರು ಇದ್ದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ