ಹಾವೇರಿ: ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವುದು, ಕಬ್ಬಿನ ರಿಕವರಿಯಲ್ಲಿ ಸಕ್ಕರೆ ಕಾರ್ಖಾನೆಗಳು ನಡೆಸುತ್ತಿರುವ ವಂಚನೆಗೆ ಕಡಿವಾಣ ಹಾಕುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬಿಗೆ ₹5,500 ದರ ನಿಗದಿಪಡಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕ ನಿರ್ಧರಿಸಿತು.
ಕಬ್ಬಿನ ರಿಕವರಿಯಲ್ಲಿ ಕಾರ್ಖಾನೆಗಳು ಪದೇ ಪದೇ ಮೋಸ ಮಾಡುತ್ತಿವೆ. ಸರ್ಕಾರದ ಆದೇಶವಿದ್ದರೂ ರೈತರಿಗೆ ಸರಿಯಾಗಿ ಹಣ ಪಾವತಿಸುತ್ತಿಲ್ಲ. ರಿಕವರಿ ಪ್ರಮಾಣದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಈ ವರ್ಷವೂ ಕಬ್ಬಿನ ಬೆಲೆ ಕಡಿಮೆ ಮಾಡುವ ಹುನ್ನಾರ ನಡೆಯುತ್ತಿದೆ ಎಂಬುದು ರೈತರ ಆರೋಪವಾಗಿದೆ. ಇದನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಹೊಸರಿತ್ತಿ, ಕೊರಡೂರು, ಕೊಡಬಾಳ, ಮರೋಳ, ನೆಗಳೂರು, ನೀರಲಗಿ, ಬೆಳವಿಗಿ, ಗುಯಿಲಗುಂದಿ, ಮೇಲ್ಮುರಿ, ಕಲಿವಾಳ, ಚೆನ್ನೂರು, ಕೆಸರಹಳ್ಳಿ, ಕೋಣನತಂಬಗಿ, ಮಣ್ಣೂರು, ಹಳೇರಿತ್ತಿ, ಕಡಕೋಳ, ಕಿತ್ತೂರು, ಮರಡೂರು, ಹಾಲಗಿ ಸೇರಿದಂತೆ ಹಲವು ಗ್ರಾಮಗಳ 300ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.ರೈತರ ಪ್ರಮುಖ ಬೇಡಿಕೆಗಳು: ಕಬ್ಬು ಬೆಳೆಗೆ ವಿಮಾ ಸೌಲಭ್ಯ ಕಲ್ಪಿಸಬೇಕು. ಎಲ್ಲ ಸಕ್ಕರೆ ಕಾರ್ಖಾನೆಗಳ ಎದುರು ಸರ್ಕಾರದ ವತಿಯಿಂದ ತೂಕದ ಯಂತ್ರ ಅಳವಡಿಸಬೇಕು. ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಮಾದರಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ರಿಕವರಿ ಲ್ಯಾಬ್ ಸ್ಥಾಪಿಸಬೇಕು. ಕಬ್ಬಿನ ರಿಕವರಿ ಪ್ರಮಾಣವನ್ನು ಹಿಂದಿನಂತೆ ಶೇ. 10.25ಕ್ಕೆ ತರಬೇಕು. ಕಬ್ಬು, ಭತ್ತ, ಮೆಕ್ಕೆಜೋಳದಿಂದ ಎಥನಾಲ್ ಉತ್ಪಾದನೆಗೆ ಆಲೆಮನೆಗಳಿಗೂ ಅವಕಾಶ ನೀಡಬೇಕು. ಆಲೆಮನೆಗಳಲ್ಲಿ ಉತ್ಪಾದನೆಯಾಗುವ ಎಥನಾಲ್‌ನ್ನು ಸರ್ಕಾರ ರೈತರಿಂದ ಖರೀದಿಸುವ ವ್ಯವಸ್ಥೆ ಮಾಡಬೇಕು. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳನ್ನು ನವೆಂಬರ್ 1ರ ನಂತರ ಆರಂಭಿಸಬೇಕು. ಪ್ರಸಕ್ತ ಸಾಲಿನ ಎಫ್‌ಆರ್‌ಪಿ ದರ ₹3,650 ರು. ಇದ್ದು, ಇದರ ಮೇಲೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹800 ನೀಡಬೇಕು. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಹಣವನ್ನು ಕೂಡಲೇ ರೈತರಿಗೆ ಪಾವತಿಸಬೇಕು ಎಂಬುದು ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಯಾಗಿವೆ.