
ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಆಗಮಿಸಿ ಸಭೆ ನಡೆಸಿ, ಸಮಸ್ಯೆ ಪರಿಹರಿಸುವ ಕುರಿತು ತಿಳಿಸಿದಾಗ, ಕಳೆದ 50 ವರ್ಷಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಮುಂದುವರಿದಿದ್ದು, ನಗರಸಭೆ ಸದಸ್ಯರು ವಾರ್ಡಿನ ಸಾರ್ವಜನಿಕರಿಂದ ನಿತ್ಯ ಪೇಚಾಟ ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿಗಳೊಂದಿಗೆ ವಾಗ್ವಾದ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಭೆ ನಡೆಸಿ ಚರ್ಚಿಸೋಣ. ಐದು ಜನ ಮುಖಂಡರು ಸಭೆಗೆ ಬನ್ನಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ತಿಳಿಸಿದಾಗ ಬಿಜೆಪಿ ಮುಖಂಡರು ಐದು ಜನ ಆಗುವುದಿಲ್ಲ ಬಿಜೆಪಿ ಎಲ್ಲ ಸದಸ್ಯರನ್ನು ಸಭೆ ಕರೆಯಿರಿ ಎಂದಾಗ ಜಿಲ್ಲಾಧಿಕಾರಿ ನಗರಸಭೆ ಸದಸ್ಯರಿಗೆ ಡಿಕ್ಟೇಟ್ ಮಾಡಬೇಡಿ ಎಂದು ಹೇಳಿದರು. ಇದಕ್ಕೆ ರೊಚ್ಚಗೆದ್ದ ಬಿಜೆಪಿ ಸದಸ್ಯರು ನಾವು ಡಿಕ್ಟೇಟರ್ ಅಲ್ಲ ಸಾರ್ವಜನಿಕರ ಪ್ರತಿನಿಧಿಗಳು. ನೀರಿನ ಸಮಸ್ಯೆ ಕೇಳಲು ಭೇಟಿಗೆ ಬಂದರೆ ಭೇಟಿಯಾಗುವುದಿಲ್ಲ. ಸದಸ್ಯರ ಸಮಸ್ಯೆ ಕೇಳೋರಿಲ್ಲ ಎಂದು ಜಿಲ್ಲಾಧಿಕಾರಿಗಳ ಜತೆಗೆ ವಾಗ್ವಾದಕ್ಕಿಳಿದರು.ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಸದಸ್ಯರು, ಕಾರ್ಯಕರ್ತರು, ಮುಖಂಡರು ಇದ್ದರು.