ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿಗೆ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕೆತ್ತಿಕಲ್‌ನಲ್ಲಿ ಉಂಟಾದ ಭೂಕುಸಿತ ರೀತಿಯಲ್ಲೇ ಅಲ್ಲೇ ಸಮೀಪದ ಉಳಾಯಿಬೆಟ್ಟು ಬಳಿಯ ಪೆರ್ಮಂಕಿ ಕೈಗುರಿ ಎಂಬಲ್ಲಿ ನಿರಂತರ ಮಳೆಗೆ ಭಾರೀ ಭೂ ಕುಸಿತ ಸಂಭವಿಸಿದೆ.ಇದರಿಂದಾಗಿ ಉಳಾಯಿಬೆಟ್ಟು ಕಡೆಯಿಂದ ಪೆರ್ಮಾಯಿ ಚರ್ಚ್ ಕಡೆಗೆ ಸಾಗುವ ರಸ್ತೆಗೆ ಸಂಪರ್ಕಗೊಳ್ಳುವ ಡಾಂಬರು ರಸ್ತೆಯೇ ಪೂರ್ತಿ ಕುಸಿದು ಬಿದ್ದಿದೆ. ಹೀಗಾಗಿ ಈ ಭಾಗದ ಜನರು ಮಲ್ಲೂರು ಮೂಲಕ ಸುತ್ತುಬಳಸಿ ಮಂಗಳೂರು ಬರುವಂತಾಗಿದೆ.ರಸ್ತೆ ಸುಮಾರು ನಾಲ್ಕು ಅಡಿಗಳಷ್ಟು ಕುಸಿದಿದ್ದು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮನೆ, ತೋಟಗಳಿಗೆ ಮಣ್ಣು ಬಿದ್ದು ಹಾನಿಯಾಗಿದೆ. ತೋಟದಲ್ಲಿ ಅಡಕೆ, ತೆಂಗಿನ ಮರಗಳಿಗೂ ಹಾನಿಯಾಗಿದ್ದು ಮಣ್ಣಿನ ಭಾರಕ್ಕೆ ವಾಲಿ ನಿಂತಿವೆ. ಭಾನುವಾರದಿಂದ ಗುಡ್ಡ ಕುಸಿತ ಶುರುವಾಗಿದ್ದು ಸೋಮವಾರ ಮತ್ತಷ್ಟು ಕುಸಿತಗೊಂಡು ಆಸುಪಾಸಿನ ಕೃಷಿ ತೋಟಗಳಿಗೆ ಭಾರೀ ಹಾನಿಯಾಗಿದೆ. ಮಣ್ಣು ತೆರವಿಗೆ ಮಂಗಳವಾರವೂ ಕಾರ್ಯಾಚರಣೆ ಶುರುವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೆರ್ಮಂಕಿ ಪದವಿನಿಂದ ಪಾಲಿಕಟ್ಟೆ ಹಾಗೂ ಮಲ್ಲೂರು ಉದ್ದಬೆಟ್ಟುವಿಗೆ ಸಂಪರ್ಕಿಸುವಲ್ಲೂ ರಸ್ತೆ ಭೂಕುಸಿತದಿಂದ ಕುಸಿದು ಹೋಗಿದೆ. ಇದರಿಂದ ನೂರಾರು ಮನೆಗಳಿಗೆ ಸಂಚಾರಕ್ಕೆ ಅಡಚಣೆಯಾಗಿದ್ದು, ಪರ್ಯಾಯ ರಸ್ತೆ ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಪೆರ್ಮಂಕಿ ಕೈಗುರಿಯಲ್ಲಿ ಕೈಗುರಿ ನಿವಾಸಿ ಯೆಹುಜೆ ಎಂಬವರ ಮನೆ ಬಿರುಕು ಬಿಟ್ಟಿದ್ದು, ವಾಸ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿಯಾಗಿದೆ. ಮನೆಯಲ್ಲಿದ್ದ ನಿವಾಸಿಗಳು ವಾಮಂಜೂರಿನ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.ಪೆರ್ಮಂಕಿ ಪ್ರದೇಶ ಭೌಗೋಳಿಕವಾಗಿ ಎತ್ತರ ಪ್ರದೇಶವಾಗಿದ್ದು, ಇಲ್ಲಿಂದ ಕೆಳಮುಖವಾಗಿ ಕೈಗುರಿ ಕಡೆಗೆ ತೋಡು, ತೊರೆಗಳು ಹರಿಯುತ್ತಿವೆ. ಇದರಿಂದ ಕಿರು ಜಲಪಾತಗಳು ಸೃಷ್ಟಿಯಾಗಿದ್ದು, ಭೂಕುಸಿತದಿಂದ ಇಲ್ಲಿನ ಜಲಪಾತ, ತೊರೆಗಳು ಬೇರೆ ದಾರಿ ಹಿಡಿದು ಹರಿಯುತ್ತಿವೆ. ತೋಡಿನಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದರೆ, ಭೂಕುಸಿತದಿಂದ ಮಣ್ಣು ಕುಸಿದು ಬಿದ್ದು ತೋಡಿನ ನೀರು ಎಲ್ಲೆಂದರಲ್ಲಿ ಸಾಗುತ್ತಿದೆ. ಪೆರ್ಮಂಕಿ, ಪೆರ್ಮಾಯಿ ಮೇಲ್ಭಾಗದಲ್ಲಿ ಕೆಂಪು ಕಲ್ಲಿನ ಕೋರೆಗಳಿದ್ದು ನಿರಂತರ ಮಳೆಗೆ ನೀರು ನಿಂತಿದ್ದರಿಂದ ಕೆಳಬಾಗದ ಮಣ್ಣು ಸಡಿಲಗೊಂಡು ಕುಸಿದಿದೆಯೇ ಎನ್ನುವ ಬಗ್ಗೆ ಅಧ್ಯಯನ ಆಗಬೇಕಿದೆ.ಪೆರ್ಮಂಕಿ ಕೈಗುರಿ ಭೂಕುಸಿತ ಪ್ರದೇಶಕ್ಕೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೂಕುಸಿತದ ಬಗ್ಗೆ ವರದಿ ತಯಾರಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದಿದ್ದಾರೆ. ಈ ಘಟನೆಯಿಂದ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಬಿರುಕು ಬಿಟ್ಟ ಮನೆಯವರು ಸ್ಥಳಾಂತರಗೊಂಡಿದ್ದಾರೆ. ಮಳೆ ನಿಲ್ಲದೆ ಪರಿಹಾರ ಕಾರ್ಯಾಚರಣೆ ಕಷ್ಟ. ಇದನ್ನು ಜಿಲ್ಲಾಡಳಿತದಿಂದ ನಡೆಸಬೇಕೇ ಹೊರತು ಪಂಚಾಯಿತಿ ಮಟ್ಟದಲ್ಲಿ ಸಾಧ್ಯವಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಉಳಾಯಿಬೆಟ್ಟು ಪಿಡಿಒ ಅನಿತಾ ಕಾತ್ಯಾಯಿನಿ ತಿಳಿಸಿದ್ದಾರೆ.