ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಗ್ರಾಮೀಣ ಪ್ರದೇಶವು ಸ್ವಚ್ಛತೆಯಿಂದ ಕೂಡಿದ್ದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ತಾಲೂಕಿನ ಪುರ ಗ್ರಾಮದಲ್ಲಿ ದಿಡಗ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಕಸ ಸಂಗ್ರಹಣೆ ಕಾರ್ಯ ವೀಕ್ಷಿಸಿ ಮಾತನಾಡಿ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವುದರಿಂದ ಸಾಂಕ್ರಮಿಕ ರೋಗಗಳು ಹರಡುವುದನ್ನು ಸುಲಭದಲ್ಲಿ ತಡೆಗಟ್ಟಬಹುದು ಎಂದರು.
ಕಸ ಸಂಗ್ರಹಣೆ ಕಾರ್ಯದಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚು ತೊಡಗಿಕೊಂಡಿರುವುದು ವಿಶೇಷವಾಗಿದೆ. ಕಾರ್ಮಿಕರ ಆರೋಗ್ಯದ ಕಡೆಗೂ ಹೆಚ್ಚಿನ ಆದ್ಯತೆ ನೀಡಲಿದ್ದು, ವರ್ಷದಲ್ಲಿ ೨ರಿಂದ ೩ ಬಾರಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಅಥವಾ ಕಸ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಮೂಲಕ ಆಯಾ ವ್ಯಾಪ್ತಿಯ ಗ್ರಾಮಗಳ ಕಸ ಸಂಗ್ರಹಣೆಗೆ ಆದ್ಯತೆ ನೀಡಲಾಗುವುದು ಎಂದರು.
ನುಗ್ಗೇಹಳ್ಳಿ, ಬಾಗೂರು, ಕಲ್ಲೇಸೋಮನಹಳ್ಳಿ ಹಾಗೂ ಹಿರೀಸಾವೆ- ಜುಟ್ಟನಹಳ್ಳಿ ಏತನೀರಾವರಿ ಯೋಜನೆಗಳನೀರೆತ್ತುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಹಂಗಾಮಿನ ಅಂತ್ಯದೊಳಗೆ ಎಲ್ಲ ಕೆರೆಗಳು ಬಹುತೇಕ ಭರ್ತಿಯಾಗಲಿವೆ ಎಂದು ಮಾಹಿತಿ ನೀಡಿದರು.
ದಿಡಗ- ಕಬ್ಬಳಿ ಏತನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಯ ಹಂತದಲ್ಲಿದೆ. ಅನುಮೋದನೆ ದೊರೆಯುತ್ತಿದ್ದಂತೆಯೇ ಜರೂರಾಗಿ ಕಾಮಗಾರಿ ಪ್ರಾರಂಭಿಸಿ ಮುಂದಿನ ೨-೩ವರ್ಷಗಳಲ್ಲಿ ಪೂರ್ಣಗೊಳಿಸಿ, ವ್ಯಾಪ್ತಿಯ ಸುಮಾರು ೨೨ಕ್ಕೂ ಹೆಚ್ಚು ಕೆರೆ- ಕಟ್ಟೆಗಳಿಗೆ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಸಾವಿತ್ರಮ್ಮ, ಸದಸ್ಯ ಪಿ.ಕೆ.ಶಿವಶಂಕರ್, ಮಾಜಿ ಸದಸ್ಯ ಚಂದ್ರಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀಕಂಠಪ್ಪ, ಪಿಡಿಒ ಕೆ.ಎಸ್.ಪ್ರಕಾಶ್ ಹಾಗೂ ಇನ್ನಿತರರು ಇದ್ದರು.