ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Feb 05, 2026, 02:45 AM IST
4ುಲು1 | Kannada Prabha

ಸಾರಾಂಶ

ಹಗಲು, ರಾತ್ರಿ ಎನ್ನದೆ ಕಿರಾಣಿ ಅಂಗಡಿ, ಹೊಟೇಲ್‌, ಚಹಾ ಅಂಗಡಿ, ಪಾನ್‌ಶಾಪ್‌ಗಳಲ್ಲಿ ಸಹ ಮದ್ಯ ಮಾರಾಟ ಮಾಡಲಾಗುತ್ತಿದೆ.

ಗಂಗಾವತಿ: ತಾಲೂಕಿನ ಡಣಾಪೂರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಿ, ಮದ್ಯ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಢಣಾಪೂರ ಗ್ರಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹೆಬ್ಬಾಳ ಗ್ರಾಮದ ನಿವಾಸಿ ಭರವಣ್ಣ ಮಾತನಾಡಿ, ಡಣಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹಗಲು, ರಾತ್ರಿ ಎನ್ನದೆ ಕಿರಾಣಿ ಅಂಗಡಿ, ಹೊಟೇಲ್‌, ಚಹಾ ಅಂಗಡಿ, ಪಾನ್‌ಶಾಪ್‌ಗಳಲ್ಲಿ ಸಹ ಮದ್ಯ ಮಾರಾಟ ಮಾಡಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ಮದ್ಯ ದೊರೆಯುತ್ತಿರುವ ಕಾರಣಕ್ಕೆ ಗ್ರಾಮದಲ್ಲಿ ಯುವಕರು, ವಯಸ್ಕರು ಮದ್ಯಕ್ಕೆ ಸಂಪೂರ್ಣ ದಾಸರಾಗಿದ್ದಾರೆ. ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಹ ಮದ್ಯ ಸೇವನೆ ಮಾಡಲು ಮುಂದಾಗುತ್ತಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಉತ್ತಮ ವಾತಾವರಣ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತಮ ಪರಿಸರದಿಂದ ಕೂಡಿದ ಗ್ರಾಮವನ್ನಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಡಣಾಪೂರ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಲ್ಲಿಸಿ ಮದ್ಯ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಬೇಕಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯಬೇಕು ಎನ್ನುವ ಗ್ರಾಮಸ್ಥರ ಒತ್ತಾಯದಿಂದ ಕಳೆದ ಒಂದು ತಿಂಗಳ ಹಿಂದೆ ಗ್ರಾಮಸ್ಥರು ಅಬಕಾರಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಆದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟ ತಡೆಯಲು ಮುಂದಾಗಿಲ್ಲ. ಕೇವಲ ಮನವಿ ಸ್ವೀಕರಿಸಿ ಸುಮ್ಮನಾಗಿದ್ದಾರೆ. ಗ್ರಾಮಸ್ಥರು ಮದ್ಯ ಮುಕ್ತ ಗ್ರಾಮ ನಿರ್ಮಾಣ ಇಚ್ಛಿಸಿದರೆ ಅಧಿಕಾರಿಗಳು ಸಾಥ್ ನೀಡದೆ ಇರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ. ಅದಕ್ಕಾಗಿಯೇ ಬೇಸತ್ತಿರುವ ಗ್ರಾಮಸ್ಥರು ಡಣಾಪೂರ ಗ್ರಾಮದಿಂದ ತಹಸೀಲ್ದಾರ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಪೊಲೀಸ್ ಇಲಾಖೆಯವರು ಪಾದಯಾತ್ರೆ ನಡೆಸುವುದು ಬೇಡ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿ ಗ್ರಾಮಕ್ಕೆ ಆಗಮಿಸಿದ್ದಾರೆ. ಅಧಿಕಾರಿಗಳು ಆದಷ್ಟು ಬೇಗ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವಿರುದ್ಧ ಕ್ರಮಕ್ಕೆ ಮುಂದಾಗಿ ಡಣಾಪೂರ ಗ್ರಾಪಂ ವ್ಯಾಪ್ತಿ ಮದ್ಯ ಮುಕ್ತ ಗ್ರಾಮ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಈ. ಫಕೀರಪ್ಪ, ಹೊನ್ನೂರಪ್ಪ ಡಣಾಪೂರ, ಈ.ಚಿದಾನಂದಪ್ಪ, ಮಲ್ಲನಗೌಡ, ಶಿವಕುಮಾರ, ಸಿ.ಎಚ್.ಮಲ್ಲನಗೌಡ, ಅಯ್ಯಪ್ಪ, ಪಿಲ್ಲಿಕೊಂಡಯ್ಯ, ಪಾತಪ್ಪ ಹೆಬ್ಬಾಳ, ಕೋಟೆ ಶರಣಪ್ಪ, ಹುಸೇನ್ ಜಮೀರ್, ನಿಂಗಪ್ಪ,ರಾಘವೇಂದ್ರ, ಕೃಷ್ಣ ಹಾಗೂ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ನಿರ್ಮಾಣವೇ ವಿಬಿ-ಜಿ ರಾಮ್-ಜಿ ಗುರಿ: ಹರಿಪ್ರಕಾಶ ಕೋಣೆಮನೆ
ಇಂದಿನಿಂದ ಡಂಬಳದಲ್ಲಿ ಹಜರತ್ ಜಮಾಲಶಾವಲಿ ಶರಣರ ಉರೂಸ್