ಭಟ್ಕಳ: ತಾಲೂಕಿನ ಕಾಯ್ಕಿಣಿಯ ಶಿರಾಣಿಕೇರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮುಖ್ಯ ಶಿಕ್ಷಕ ಪ್ರಸಾದ್ ಅವರು ಸುಮಾರು 18 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2009ರಲ್ಲಿ ಜಿಪಂ ಅನುದಾನದಲ್ಲಿ ಮಂಜೂರಾದ ಬಾವಿ ಹಾಗೂ ನಂತರದ ವರ್ಷಗಳಲ್ಲಿ ನಡೆದ ಕಾಮಗಾರಿಗಳ ವಿಷಯದಲ್ಲಿಯೂ ಅವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಇನ್ನೊಂದೆಡೆ, ಶಾಲೆಗೆ ಮಂಜೂರಾದ ಎಂಟು ಗುಂಟೆ ಜಾಗದಲ್ಲಿ ಕೇವಲ ಎರಡು ಗುಂಟೆ ಪ್ರದೇಶಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಿ ಉಳಿದ ಜಾಗವನ್ನು ಬಿಟ್ಟಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ವರ್ಗಾವಣೆಯನ್ನು ತಡೆಹಿಡಿಯುವಂತೆ ಧಾರವಾಡ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಸ್ಥಳೀಯರು ತಿಳಿಸಿದರು.
ನ್ಯಾಯಾಲಯದ ತೀರ್ಪು ಬರುವವರೆಗೆ ಶಿಕ್ಷಕರನ್ನು ಬಿಡುಗಡೆಗೊಳಿಸಬಾರದು ಎಂದು ಅವರ ಆಗ್ರಹಿಸಿದರು. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿರುವುದನ್ನು ಖಂಡಿಸಿ ಧರಣಿ ನಡೆಸಿದರು. ನಮ್ಮ ಮನವಿಯನ್ನು ಪರಿಗಣಿಸದೆ ಶಿಕ್ಷಕರನ್ನು ಬಿಡುಗಡೆಗೊಳಿಸಿರುವುದು ಸರಿಯಲ್ಲ. ಇದನ್ನು ಸರಿಪಡಿಸದಿದ್ದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದೂ ಸ್ಥಳೀಯರು ಎಚ್ಚರಿಕೆ ನೀಡಿದರು.ಪ್ರತಿಕ್ರಿಯಿಸಿದ ಮುಖ್ಯಶಿಕ್ಷಕ ಪ್ರಸಾದ್ ಎಚ್.ಎಸ್. ಅವರು, ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇನೆ. ಮೇಲಧಿಕಾರಿಗಳು ಅಥವಾ ನ್ಯಾಯಾಲಯದಿಂದ ನಿರ್ದೇಶನ ಬಂದಲ್ಲಿ ಮಾತ್ರ ವರ್ಗಾವಣೆಯನ್ನು ತಡೆಯಲು ಸಾಧ್ಯ ಎಂದು ಸ್ಪಷ್ಟಪಡಿಸಿದರು. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಾನು ಶಿವು ಮರಾಠಿ, ಎಸ್‌ಡಿಎಂಸಿ ಸದಸ್ಯರಾದ ಬಾಬು ಲಿಂಗು ಮರಾಠಿ, ಕೃಷ್ಣ ಸುಕ್ರ ಮಾರಾಠಿ, ಪ್ರೇಮ ಬಾಬು ಮರಾಠಿ, ಸ್ಥಳೀಯರಾದ ಮಹಾಬಲೇಶ್ವರ ಗಣಪತಿ ಹೆಗಡೆ, ಹೊನ್ನ ಲಕ್ಷಣ ಮರಾಠಿ, ಲಕ್ಷಣ ನಾಜೀಯಾ ಮರಾಠಿ, ಗೌರಿ ದೇವೇಂದ್ರ ಮರಾಠಿ, ಲಕ್ಷ್ಮಿ ಅಣ್ಣಪ್ಪ ಮರಾಠಿ, ಪ್ರದೀಪ್ ಅಣ್ಣಪ್ಪ ಮರಾಠಿ ಉಪಸ್ಥಿತರಿದ್ದರು.