ರೋಣ: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪಟ್ಟಣದಲ್ಲಿ ₹37 ಕೋಟಿ ವೆಚ್ಚದಲ್ಲಿ ವಿವಿಧ ಸೌಕರ್ಯಗಳುಳ್ಳ ಸುಸಜ್ಜಿತ ಕಾರ್ಮಿಕರ ಮಕ್ಕಳ ವಸತಿ ಶಾಲೆ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಕಟ್ಟಡ ಕಾರ್ಮಿಕರು ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗಕ್ಕಾಗಿ ಬೇರಡೆ ಹೋಗುವುದರಿಂದ ಅವರ ಮಕ್ಕಳಿಗೆ ಶಿಕ್ಷಣದ ತೊಂದರೆಯಾಗುತ್ತದೆ. ಇದನ್ನು ಮನಗಂಡು ಸರ್ಕಾರ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ತೆರೆಯಲು ಮುಂದಾಗಿದೆ. ರಾಜ್ಯದಲ್ಲಿ 25 ಕಾರ್ಮಿಕರ ವಸತಿ ಶಾಲೆಗಳಲ್ಲಿ ರೋಣ ಪಟ್ಟಣವೂ ಒಂದಾಗಿದೆ.
ಇಲ್ಲಿ 6ನೇ ತರಗತಿಯಿಂದ ಪಿಯುಸಿವರೆಗೆ 175 ಬಾಲಕರು, 175 ಬಾಲಕಿಯರು ಸೇರಿ ಒಟ್ಟು 350 ಮಕ್ಕಳಿಗೆ ಶಿಕ್ಷಣ ಕಲ್ಪಿಸಲಾಗುವುದು. ವಿಶಾಲವಾದ ಆಟದ ಮೈದಾನ, ಬಾಲಕಿಯರಿಗೆ, ಬಾಲಕರಿಗೆ ಪ್ರತ್ಯೇಕ ವಸತಿನಿಲಯ, ಸಿಬ್ಬಂದಿ ವರ್ಗಕ್ಕೂ ವಸತಿಗೃಹ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಪಾಟೀಲ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮೇಟಿ, ಶರಣಗೌಡ ಪಾಟೀಲ ಸರ್ಜಾಪೂರ, ಬಸವರಾಜ ನವಲಗುಂದ, ಯೂಶೂಫ ಇಟಗಿ, ಶರಣಪ್ಪ ಕಳಸಣ್ಣವರ, ಮಹಮ್ಮದ ಮಾಗಿ, ಹುಸೇನಭಾಷಾ ಓಲಿ, ಮಂಜುನಾಥ ಪೂಜಾರ, ಕಾರ್ಮಿಕ ಉಪ ಆಯುಕ್ತ ಡಿ.ಜಿ. ನಾಗೇಶ, ಹುಬ್ಬಳ್ಳಿ ಕಾರ್ಮಿಕ ಆಯುಕ್ತ ಸಚಿನ ಹಳೆಮನಿ, ತಾಲೂಕು ಕಾರ್ಮಿಕ ಅಧಿಕಾರಿ ಮಹಮ್ಮದ ಮುಸ್ತಫಾ ಮುಂತಾದವರು ಉಪಸ್ಥಿತರಿದ್ದರು.