ಕನ್ನಡಪ್ರಭವಾರ್ತೆ ಪಾವಗಡ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರಾದ ಮಂಗಳವಾಡ ಟಿ.ಹನುಮಂತರಾಯಪ್ಪ, ದಲಿತ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಸರ್ಕಾರ ನಿರ್ಲಕ್ಷ್ಯಮಾಡಿದ್ದು, ಹಕ್ಕುಪತ್ರ ಹೊಂದಿದ್ದರೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಅನೇಕ ಮಂದಿ ಮಾದಿಗ ಸಮುದಾಯದ ಫಲಾನುಭವಿಗಳು ಮೀಸಲಿದ್ದ ನಿವೇಶನ ಕಳೆದುಕೊಂಡು ಹಾದಿಬೀದಿಯಲ್ಲಿ ಗುಡಿಸಲು ಹಾಕಿಕೊಂಡು ವಾಸಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಬಡವರನ್ನು ಗುರ್ತಿಸಿ ಸರ್ಕಾರ ಹಂಚಿಕೆ ಮಾಡಿದ್ದ ನಿವೇಶನ ಹಾಗೂ ಬಗರುಹುಕಂ ಸಾಗುವಳಿ ಜಮೀನುಗಳು ಬಲಾಢ್ಯರ ಪಾಲಾಗುತ್ತಿರುವುದನ್ನು ವಿರೋಧಿಸಿದ ಅವರು, ತಾಲೂಕು ಆಡಳಿತದ ಕುಮ್ಮಕ್ಕಿನಿಂದ ಇದು ಬಲಾಢ್ಯರ ಪಾಲಾಗಿ ದಲಿತರಿಗೆ ವಂಚನೆ ಅಗುತ್ತಿದೆ. ನ್ಯಾಯಬದ್ದವಾಗಿ ನಿಯಮನುಸಾರ ಮಾದಿಗ ಸಮುದಾಯದ ಅರ್ಹ ಫಲಾನುವಿಗಳಿಗೆ ನಿವೇಶನ ಹಾಗೂ ಸಾಗುವಳಿ ಜಮೀನಿನ ಹಕ್ಕುಪತ್ರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಾದಿಗ ಫಲಾನುಭವಿಗಳ ನಿವೇಶನ ಹಾಗೂ ಬಗರುಹುಕಂ ಸಾಗುವಳಿ ಜಮೀನುಗಳ ಫಹಣಿ ಹಾಗೂ ಖಾತೆ ಮಾಡಿಕೊಡುವಲ್ಲಿ ವಿಳಂಬ ಮಾಡಿದರೆ ದಲಿತ ಪರ ಸಂಘಟನೆಗಳ ವತಿಯಿಂದ 20ರಂದು ಮಿಡಿಗೇಶಿ,ಹೊಸಕೆರೆ, ಮಧುಗಿರಿ, ಕೊರಟಗೆರೆ,ತುಮಕೂರಿಗೆ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ಎಚ್ಚರಿಸಿದರು.ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಸಿ.ಕೆ.ತಿಪ್ಪೇಸ್ವಾಮಿ, ಕನ್ನಮೇಡಿ ಕೃಷ್ಣಮೂರ್ತಿ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ,ಮಂಗಳವಾಡ ಮಂಜುನಾಥ್,ಬ್ಯಾಡನೂರು ಶಿವು, ಡಿ.ಟಿ.ನರಸಿಂಹಮೂರ್ತಿ, ನಲಿಗಾನಹಳ್ಳಿ ಮಂಜುನಾಥ್, ಚಿಕ್ಕಹಳ್ಳಿ ರಾಮಾಂಜಿನಪ್ಪ,ಪಳವಳ್ಳಿ ಗಂಗಾಧರ್, ಶಾಂತಮ್ಮ, ಹನುಮಕ್ಕ, ಎಚ್.ಮಲ್ಲೇಶ್ ಇತರರಿದ್ದರು.