371ಜೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 23, 2024 12:38 AM

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದಡಿಯಲ್ಲಿ ನೀಡಲಾಗಿರುವ 371ಜೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮತ್ತು ಪ್ರಮಾಣಪತ್ರ ನೀಡಿಕೆಯಲ್ಲಿ ಆಗುತ್ತಿರುವ ತೊಂದರೆ ನಿವಾರಣೆ ಮಾಡುವಂತೆ ಆಗ್ರಹಿಸಿ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿ । ಸರ್ಕಾರದ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದಡಿಯಲ್ಲಿ ನೀಡಲಾಗಿರುವ 371ಜೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮತ್ತು ಪ್ರಮಾಣಪತ್ರ ನೀಡಿಕೆಯಲ್ಲಿ ಆಗುತ್ತಿರುವ ತೊಂದರೆ ನಿವಾರಣೆ ಮಾಡುವಂತೆ ಆಗ್ರಹಿಸಿ ಕೊಪ್ಪಳ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಜಮಾಯಿಸಿದ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಹೋರಾಟಗಾರರು ಮೆರವಣಿಗೆಯಲ್ಲಿ ಮುಂಡರಗಿ ಭೀಮರಾಯ ವೃತ್ತದ ಮೂಲಕ ಬಸವೇಶ್ವರ ವೃತ್ತದವರೆಗೂ ಬೃಹತ್ ಮೆರವಣಿಗೆಯಲ್ಲಿ ಸಾಗಿದರು.

ರಸ್ತೆಯ ತುಂಬಾ ಸಾವಿರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದರಿಂದ ಟ್ರಾಫಿಕ್ ನಿಯಂತ್ರಣ ಮಾಡಲು ಪೊಲೀಸರು ಹೆಣಗಾಡಬೇಕಾಯಿತು. ಬಳಿಕ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ, ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ:ಪ್ರತಿಭಟನಾನಿರತರು ಬಸವೇಶ್ವರ ವೃತ್ತದಲ್ಲಿ ಹೆದ್ದಾರಿ ಬಂದ್ ಮಾಡಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಯಿತು. ಈ ನಡುವೆ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯಾಯಿತು. ಪ್ರತಿಭಟನೆ ಬೇಗನೆ ಮುಗಿಸಿ ಎಂದು ನಗರ ಠಾಣೆಯ ಪಿಐ ಜಯಪ್ರಕಾಶ ಹೇಳಿದ್ದು ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಯಿತು. ಇದು ನಮ್ಮ ಜೀವದ ಹೋರಾಟ. ಇದಕ್ಕಾಗಿ ನೀವು ಬೆಂಬಲಿಸಿ, ನೀವು ಹೇಳಿದಂತೆ ಪ್ರತಿಭಟನೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಲಾಯಿತು. ಆಕ್ರೋಶ ಜೋರಾಗುತ್ತಿದ್ದಂತೆ ಪೊಲೀಸರು ಮೌನವಾದರು.

ಪ್ರಮಾಣ ಪತ್ರಕ್ಕಾಗಿ ಪರದಾಟ:

ಕಲ್ಯಾಣ ಕರ್ನಾಟಕದಲ್ಲಿಯೇ ಜನಿಸಿ, ಮೂಲನಿವಾಸಿಗಳಾಗಿದ್ದರೂ ಸಹ ಕೊಪ್ಪಳದಲ್ಲಿ 371ಜೆ ಸ್ಥಾನಮಾನ ಪ್ರಮಾಣ ಪತ್ರ ಪಡೆಯುವುದೇ ದೊಡ್ಡ ಹರಸಾಹಸವಾಗಿದೆ. ಈ ಕುರಿತು ಹೋರಾಟಗಾರರು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರನ್ನು ಭೇಟಿಯಾಗಿ, ಆಗುತ್ತಿರುವ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿಬಂದರು. ತಪ್ಪಾಗಿ ಅರ್ಥೈಸಿ, ವಿದ್ಯಾರ್ಥಿಗಳಿಗೆ ತೊಂದರೆ ಕೊಡಲಾಗುತ್ತದೆ. ಹೀಗಾಗಿ, ಸರಿಪಡಿಸಿ ಎಂದು ಆಗ್ರಹಿಸಿದರು.

ನಮಗೆ ನ್ಯಾಯ ಬೇಕು. ಆಗುತ್ತಿರುವ ಅನ್ಯಾಯ ಸಹಿಸಿಕೊಂಡು ಇರುವುದಕ್ಕೆ ಸಾಧ್ಯವೇ ಇಲ್ಲ. ಸಂವಿಧಾನದ ಅಡಿಯಲ್ಲಿ ನೀಡಿರುವ ಸ್ಥಾನಮಾನವನ್ನು ರಾಜ್ಯ ಸರ್ಕಾರ ಸರಿಯಾಗಿ ಜಾರಿ ಮಾಡುತ್ತಿಲ್ಲ. ಜಾರಿ ಮಾಡುವ ವೇಳೆಯಲ್ಲಿ ವಿಶೇಷ ಸ್ಥಾನಮಾನವನ್ನು ತಪ್ಪಾಗಿ ಅರ್ಥೈಸಿ, ಅನ್ಯಾಯ ಮಾಡುತ್ತಿರುವ ಕುರಿತು ಸುದೀರ್ಘ ವಿವರಣೆಯನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಪರವಾಗಿ ಅಧಿಕಾಯೊಬ್ಬರು ಆಗಮಿಸಿ ಸ್ವೀಕರಿಸಿದರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಯುವ ಘಟಕದ ಅಧ್ಯಕ್ಷ ರಮೇಶ ತುಪ್ಪದ ಹಾಗೂ ಶಿವಕುಮಾರ ಕುಕನೂರು, ಸಂತೋಷ ದೇಶಪಾಂಡೆ ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟನ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ, ಗೌತಮ ಪಾಟೀಲ್, ಮಾಜಿ ಸಂಸದ ಸಂಗಣ್ಣ ಕರಡಿ, ಡಾ. ಬಸವರಾಜ, ರಾಘವೇಂದ್ರ ಪಾನಘಂಟಿ, ಪ್ರಭು ಹೆಬ್ಬಾಳ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಶರಣಪ್ಪ ಜಡಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಹಿರಿಯ ವಕೀಲರಾದ ಆಸಿಪ್ ಅಲಿ, ವಿ.ಎಂ. ಭೂಸನೂರುಮಠ, ಸಂಧ್ಯಾ ಮಾದಿನೂರು, ಬಸವರಾಜ ಬಳ್ಳೊಳ್ಳಿ, ಗಿರೀಶ ಕಣವಿ, ಎಂ.ವಿ. ಪಾಟೀಲ್, ಬಸವರಾಜ, ಪ್ರಭು ಉಪನಾಳ, ಸಾವಿತ್ರಿ ಮುಜುಮದಾರ, ನಿರ್ಮಲಾ ಬಳ್ಳೊಳ್ಳಿ, ಗಿರೀಶ ಪಾನಘಂಟಿ, ಹುಲಗಪ್ಪ ಕಟ್ಟಿಮನಿ, ಸಂಕನಗೌಡ, ಮಹಾಲಕ್ಷ್ಮಿ ಕಂದಾರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯೇಕ ರಾಜ್ಯ ಕೇಳಲ್ಲ-ರಜಾಕ್:

ಪ್ರತ್ಯೇಕ ರಾಜ್ಯವನ್ನು ನಾವು ಕೇಳುವುದಿಲ್ಲ, ಆದರೆ, ಅನ್ಯಾಯ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಅವರು, ನೇಮಕಾತಿಯಲ್ಲಿ ನಮಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಮೀಸಲಾತಿಯನ್ನೇ ತಪ್ಪಾಗಿ ಅರ್ಥೈಸಲಾಗುತ್ತಿದೆ. ಉಳಿಕೆ ವೃಂದ ಎನ್ನುವುದೇ ತಪ್ಪು. ಕಲ್ಯಾಣ ಕರ್ನಾಟಕ ಹಾಗೂ ಕರ್ನಾಟಕ ಎನ್ನುವುದರಡಿಯಲ್ಲಿ ನೇಮಕಾತಿಯಾಗಬೇಕು. ಆದರೆ, ಉಳಿಕೆ ವೃಂದದಲ್ಲಿ ನಮಗೆ ಪೈಪೋಟಿಗೂ ಅವಕಾಶ ನೀಡುತ್ತಿಲ್ಲ. ಇದು ಅತ್ಯಂತ ಕಾನೂನು ಬಾಹಿರವಾಗಿದೆ ಎಂದರು.

ಇದನ್ನು ಸರಿಪಡಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದು, ರಾಜ್ಯ ಸರ್ಕಾರ ಕೂಡಲೇ ಸರಿಪಡಿಸಬೇಕು. ಪ್ರಮಾಣ ಪತ್ರವನ್ನು ನೀಡುವಲ್ಲಿಯೂ ಅನ್ಯಾಯವಾಗುತ್ತಿದೆ. ಕೊಪ್ಪಳದಲ್ಲಿ ಅರ್ಹರಿಗೂ ಸಿಗದಂತೆ ಆಗುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.ಅನ್ಯಾಯ ಸಹಿಸಲ್ಲ-ಸಂಗಣ್ಣ ಕರಡಿ:

371ಜೆ ಸ್ಥಾನಮಾನ ಸುಮ್ಮನೇ ಬಂದಿಲ್ಲ. ಹೋರಾಟ ಮಾಡಿ ಪಡೆದಿದ್ದೇವೆ. ಈಗ ಅದರ ವಿರುದ್ಧ ಹೋರಾಟ ಮಾಡುತ್ತಿರುವುದು ಸರಿಯಲ್ಲ. ಅನ್ಯಾಯವನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಸಿರುಪೀಠ ಎನ್ನುವ ಸಂಘ ಕಟ್ಟಿಕೊಂಡು 371ಜೆ ರದ್ದು ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನ್ಯಾಯಯುತವಾಗಿ ಸಿಕ್ಕಿರುವ ಸ್ಥಾನಮಾನವನ್ನು ಕಿತ್ತುಕೊಳ್ಳುವುದಕ್ಕೆ ಬಿಡುವುದಿಲ್ಲ ಎಂದರು.

Share this article