ಶಿರಹಟ್ಟಿ: ರಾಜ್ಯ ಸರ್ಕಾರವು ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಪರವಿಲ್ಲದೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಸರ್ಕಾರಿ ನೇಮಕಾತಿಯಲ್ಲೂ ವಿಳಂಬ ನೀತಿ ಅನುಸರಿಸುತ್ತಿದೆ. ತಕ್ಷಣವೇ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘಟನೆಯ ರಾಜ್ಯ ಹಾಸ್ಟೆಲ್ ಪ್ರಮುಖರಾದ ಅಭಿಷೇಕ್ ಉಮಚಗಿ, ಶಿರಹಟ್ಟಿ ನಗರ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ ಮಾತನಾಡಿ, ೪೩ ಇಲಾಖೆಗಳಲ್ಲಿ ೨,೮೧,೮೮೧ ಹುದ್ದೆಗಳು ಖಾಲಿ ಇರುವ ಕಾರಣ ಉದ್ಯೋಗ ಆಕಾಂಕ್ಷಿಗಳು ವಂಚಿತರಾಗುತ್ತಿದ್ದಾರೆ. ಸರ್ಕಾರಿ ನೇಮಕಾತಿ ಶೀಘ್ರವಾಗಿ ನಡೆಯಬೇಕು. ಹಲವು ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ತುಂಬಾ ಇರುವುದರಿಂದ ಸಾರ್ವಜನಿಕ ಸೇವೆಗಳು ಸರಿಯಾಗಿ ದೊರೆಯುತ್ತಿಲ್ಲ. ಯುವಕರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ. ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಲು ಸರ್ಕಾರಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಲು ಶಿಕ್ಷಣ, ಆರೋಗ್ಯ, ಪೊಲೀಸ್ ಮುಂತಾದ ಮುಖ್ಯ ಕ್ಷೇತ್ರಗಳನ್ನು ಬಲಪಡಿಸಲು ಸರ್ಕಾರ ಖಾಲಿ ಹುದ್ದೆಗಳ ಪಟ್ಟಿಯನ್ನು ತಕ್ಷಣ ಪ್ರಕಟಿಸುವುದು, ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವುದು, ಪರೀಕ್ಷೆ ಮತ್ತು ಫಲಿತಾಂಶಗಳನ್ನು ಸಮಯಕ್ಕೆ ಪ್ರಕಟಿಸುವುದು, ಭ್ರಷ್ಟಾಚಾರವಿಲ್ಲದ ಪಾರದರ್ಶಕ ವ್ಯವಸ್ಥೆ ನಿರ್ಮಾಣ ಈ ವಿಷಯದಲ್ಲಿ ಸಾರ್ವಜನಿಕ ಒತ್ತಡವೂ ಇದೆ ಎಂದರು.ಶಿಕ್ಷಣದ ಬಿಕ್ಕಟ್ಟು ಇಂದಿನ ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ತಕ್ಷಣ ಗಮನಿಸುವ ಅಗತ್ಯವಿದೆ. ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಅಭಾವ, ಗುಣಮಟ್ಟದ ಶಿಕ್ಷಣದ ಲೋಪ- ಇವೆಲ್ಲವೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ. ಈ ಹಿನ್ನೆಲೆ ಸರ್ಕಾರವು ಶೀಘ್ರವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದು ಅತ್ಯಗತ್ಯ ಎಂದರು.ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳು ಯುವಕರ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತಿವೆ ಎಂದು ದೂರಿದರು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ನೇಮಕಾತಿ ವಿಷಯದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ನೇಮಕಾತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಮನವಿ ಸ್ವೀಕರಿಸಿದರು. ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಇದ್ದರು.