ಎಂ.ಎನ್‌.ಆರ್‌. ಪ್ರೊಡಕ್ಷನ್ ಲಾಂಛನದಡಿ ಕರಾವಳಿಯ ಹಾಸ್ಯ ನಟರ ದಂಡು ಅಭಿನಯಿಸಿರುವ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕವೂ ಕರಾವಳಿಯ ಕಲಾವಿದರ ಹೆಸರು ಕನ್ನಡ ಮಾತ್ರವಲ್ಲದೆ ಎಲ್ಲೆಡೆ ಪಸರಿಸಲಿ ಎಂದು ಚಿತ್ರದ ನಿರ್ಮಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಶನಿವಾರ ಮಂಗಳೂರಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ‘ವಾದಿರಾಜ ವಾಲಗ ಮಂಡಳಿ’ ಪೋಸ್ಟರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗುಂಡುಮಾಮ ಖ್ಯಾತಿಯ ನವೀನ್ ಡಿ.ಪಡೀಲ್, ‘ಸು ಫ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷ್ಮಣ ಮಲ್ಲೂರು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್ ನಾಯಕರಾಗಿ, ತನ್ವಿ ರಾವ್, ವೇನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ. ‘ವರಾಹ ರೂಪಂ’ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ. ಇದನ್ನು ಮಲೆಯಾಳಂ, ತಮಿಳು ಭಾಷೆಗಳ ಡಬ್ಬಿಂಗ್ ನಡೆಯುತ್ತಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರ್‌, ನಿರ್ದೇಶಕ ಶಶಿರಾಜ್ ಕಾವೂರು, ವಿವಿಎಂ ತಂಡದ ನವೀನ್ ಡಿ.ಪಡೀಲ್, ಮಣಿಕಾಂತ್ ಕದ್ರಿ ಮತ್ತಿತರರು ಇದ್ದರು. ನಿರ್ದೇಶಕ ಶಶಿರಾಜ್‌ ಕಾವೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

ಎಂ.ಎನ್.ಆರ್‌. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶಸ್ವಿ ಸಿನಿಮಾ ‘ಗಲಾಟೆ’ ಮತ್ತು ‘ಜೋಗುಳ’ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದು, ಉತ್ತಮ ಅಭಿರುಚಿಯ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಒಲವು ತೋರಿಸಲಾಗಿದೆ. ಬಹು ನಿರೀಕ್ಷೆಯ ‘ವಿವಿಎಂ’ ಚಿತ್ರದ ಪೋಸ್ಟರ್‌ನ್ನು ಅನಾವರಣಗೊಳಿಸುವ ಮೂಲಕ ಚಲನಚಿತ್ರದ ಮೊದಲ ನೋಟದ ಪರಿಚಯ ಮಾಡಿಸಿದ್ದೇವೆ. ಈ ಸಿನಿಮಾದಲ್ಲೂ ಕರಾವಳಿಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಇದೊಂದು ಹಾಸ್ಯಭರಿತ, ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ ಎಂದರು.

ಬ್ರಹ್ಮಾವರ, ಮಂಗಳೂರು, ಮುಲ್ಕಿ, ಕಾಸರಗೋಡು ಮುಂತಾದ ಪ್ರದೇಶದಲ್ಲಿ ಸುಮಾರು ೫೫ ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರ ಕರಾವಳಿ ಕನ್ನಡದ ಸೊಗಡಿನಲ್ಲಿದ್ದು, ಉತ್ತಮವಾಗಿ ಮೂಡಿಬಂದಿದೆ ಎಂದರು.